ಟಿ-20 ವಿಶ್ವಕಪ್: ದುಬೈನಲ್ಲಿ ನಡೆಯುತ್ತಾ ಆಸ್ಟ್ರೇಲಿಯಾ ದರ್ಬಾರ್?
ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಅಳಿಸಿ ಹಾಕದಂಥ ದಾಖಲೆಗಳನ್ನು ನಿರ್ಮಿಸಿದೆ. ಐಸಿಸಿ ಆಯೋಜಿಸುವ ಯಾವುದೇ ಕಪ್ ಆಸ್ಟ್ರೇಲಿಯಾದ ಪಾಲು ಅನ್ನೋದನ್ನು ಫ್ಯಾನ್ಸ್ ಮೊದಲೇ ನಿರ್ಧರಿಸುವ ಕಾಲವೊಂದಿತ್ತು....
Published: 14th November 2021 11:47 AM | Last Updated: 15th November 2021 01:01 PM | A+A A-

ಆಸ್ಟ್ರೇಲಿಯಾ ತಂಡ
ಬೆಂಗಳೂರು: ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಅಳಿಸಿ ಹಾಕದಂಥ ದಾಖಲೆಗಳನ್ನು ನಿರ್ಮಿಸಿದೆ. ಐಸಿಸಿ ಆಯೋಜಿಸುವ ಯಾವುದೇ ಕಪ್ ಆಸ್ಟ್ರೇಲಿಯಾದ ಪಾಲು ಅನ್ನೋದನ್ನು ಫ್ಯಾನ್ಸ್ ಮೊದಲೇ ನಿರ್ಧರಿಸುವ ಕಾಲವೊಂದಿತ್ತು. ಅಂತಹ ಅದ್ಭುತ ಆಟಗಾರರು ಆಸ್ಟ್ರೇಲಿಯಾ ಸ್ಕ್ವ್ಯಾಡ್ ನಲ್ಲಿದ್ದರು.
ರಿಕ್ಕಿ ಪಾಂಟಿಂಗ್, ಶೇನ್ ವಾರ್ನ್, ಬ್ರೇಟ್ ಲೀ, ಆ್ಯಡಮ್ ಗಿಲಕ್ರಿಸ್ಟ್, ಸ್ಟಿವ್ ವಾ ದಂಥ ಆಟಗಾರರು ಯಾವುದೇ ಒತ್ತಡದಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಒಯ್ಯುವ ಕ್ಷಮತೆಯನ್ನು ಹೊಂದಿದ್ದರು. ಹೀಗಾಗಿ, 1990 ರಿಂದ 2000 ರಲ್ಲಿ ಕಾಂಗರೂ ಪಡೆ ಒಂದರ ಹಿಂದೆ ಒಂದರಂತೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿತ್ತು. ಸತತ 3 ಬಾರಿ ಏಕದಿನ ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾ ಪಾತ್ರವಾಗಿದೆ.
ಹ್ಯಾಟ್ರಿಕ್ ಹೀರೋ.. ಈ ಆಸ್ಟ್ರೇಲಿಯಾ!
ಕಾಂಗೂರು ತಂಡದ ಹೆಸರು ಕೇಳಿದ್ರೆ ಎದುರಾಳಿ ತಂಡದ ಆಟಗಾರರು ಗಾಬರಿಯಾಗುತ್ತಿದ್ದರು.. ಬೆವರು ಹರಿಯುತ್ತಿತ್ತು. 1999, 2003 ಮತ್ತು 2007ರಲ್ಲಿ ಆಸೀಸ್ ತಂಡ ಒನ್ ಡೇ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಟಿ20 ಮಾದರಿ ಕ್ರಿಕೆಟ್, ಜಗತ್ತನ್ನು ಪ್ರವೇಶಿಸಿದಾಗಲೂ ಅಭಿಮಾನಿಗಳು ಆಸೀಸ್ ತಂಡ ಚಾಂಪಿಯನ್ ಅನ್ನೋ ಥರ ಮಾತನಾಡ್ತಾ ಇದ್ರು. ಆದರೆ, ಆಗಿದ್ದೇ ಬೇರೆ.. 2007ರಲ್ಲಿ ಮೊದಲ ಟಿ20 ವಿಶ್ವಕಪ್ ಆಡಿದ ಬಳಿಕ ಕಾಂಗೂರು ತಂಡ ಇದುವರೆಗೂ ಒಮ್ಮೆಯೂ ಟಿ-20 ವಿಶ್ವಕಪ್ ಗೆದ್ದಿಲ್ಲ.
2010ರಲ್ಲಿ ಕಾಂಗರೂ ಪಡೆ ಫೈನಲ್ ಪ್ರವೇಶಿಸಿತ್ತಾದರೂ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಈಗ ಎರಡನೇ ಬಾರಿಗೆ ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಇನ್ನು ನ್ಯೂಜಿಲ್ಯಾಂಡ್ ಸಹ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದೆ.
ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಚೊಚ್ಚಲ ಪ್ರಶಸ್ತಿಗಾಗಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಮತ್ತು ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ.
ಆಸೀಸ್ ಪಡೆ ಟಿ-20 ವಿಶ್ವಕಪ್ ತನ್ನದಾಗಿಸಿಕೊಳ್ಳಬೇಕು ಎಂಬ 14 ವರ್ಷಗಳ ತನ್ನ ಕನಸು ನನಸು ಮಾಡಿಕೊಳ್ಳುವ ತವಕದಲ್ಲಿದೆ. ತಂಡಕ್ಕೆ ಡೇವಿಡ್ ವಾರ್ನರ್ ಫಾರ್ಮ್‌ಗೆ ಮರಳಿರುವುದು ಆಸ್ಟ್ರೇಲಿಯಾ ತಂಡದ ಬಲವನ್ನು ಹೆಚ್ಚಿಸಿದೆ. ಕಳೆದ ಪಂದ್ಯದಲ್ಲಿ ಪಾಕ್ ನೀಡಿದ್ದ 177 ರನ್ ಗುರಿಯನ್ನು ಆಸ್ಟ್ರೇಲಿಯಾ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮ್ಯಾಥ್ಯೂ ವೇಡ್ ಅವರ ಸಹಾಯದಿಂದ ಸುಲಭವಾಗಿ ಮುಟ್ಟಿತ್ತು. ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆ್ಯಡಂ ಝಾಂಪ, ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಯಾವುದೇ ಸಂದರ್ಭದಲ್ಲಿ ವಿಕೆಟ್ ಉರುಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.