ಆರ್ ಸಿಬಿ ಬಿಗ್ ಶಾಕ್!: ಎಲ್ಲಾ ಬಗೆಯ ಕ್ರಿಕೆಟ್‌ಗೆ ಎಬಿ ಡಿ ವಿಲಿಯರ್ಸ್ ನಿವೃತ್ತಿ ಘೋಷಣೆ

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿ ವಿಲಿಯರ್ಸ್ ಎಲ್ಲ ಬಗೆಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿ ವಿಲಿಯರ್ಸ್ ಎಲ್ಲ ಬಗೆಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹೌದು.. ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದು, ಇದೇ ವೇಳೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಡನಾಟವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ.


ದಕ್ಷಿಣ ಆಫ್ರಿಕಾ ಕ್ರಿಕೆಟ್‌ ದಂತಕತೆ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಹೇಳಿದ್ದು, ಆ ಮೂಲಕ ತಮ್ಮ 17 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಆಟಗಾರ ಪೂರ್ಣ ವಿರಾಮ ಹಾಕಿದ್ದಾರೆ. ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಮಾತ್ರವಲ್ಲದೇ ಎಬಿಡಿ ಐಪಿಎಲ್, ಕೌಂಟಿ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 

ಈ ಕುರಿತಂತೆ ತಮ್ಮ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಎಬಿ ಡಿವಿಲಿಯರ್ಸ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ನನ್ನ ಕ್ರಿಕೆಟ್‌ ವೃತ್ತಿ ಜೀವನ ನಂಬಲಾಗದ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ," ಎಂದು ಎಬಿಡಿ ಟ್ವೀಟ್‌ ಮಾಡುವ ಮೂಲಕ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. 

ಎಬಿ ಡಿವಿಲಿಯರ್ಸ್ 114 ಟೆಸ್ಟ್‌, 228 ಓಡಿಐ ಹಾಗೂ 78 ಟಿ20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 20,014 ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆ ಹಾಕಿದ್ದಾರೆ. 

ಆರ್ ಸಿಬಿಯಲ್ಲಿ ಎಬಿಡಿ
184 ಐಪಿಎಲ್‌ ಪಂದ್ಯಗಳಾಡಿರುವ ಅವರು 39.7 ಸರಾಸರಿಯಲ್ಲಿ 5162 ರನ್ ಸಿಡಿಸಿದ್ದಾರೆ. 2011ರಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊಟ್ಟ ಮೊದಲ ಬಾರಿ ಪ್ರತಿನಿಧಿಸಿದ್ದ ಎಬಿಡಿ, ಒಟ್ಟು 10 ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ 156 ಐಪಿಎಲ್‌ ಪಂದ್ಯಗಳಾಡಿರುವ ಎಬಿ ಡಿವಿಲಿಯರ್ಸ್‌, 4,491 ರನ್‌ಗಳನ್ನು ಸಿಡಿಸಿದ್ದಾರೆ. ಆರ್‌ಸಿಬಿ ಇತಿಹಾಸದಲ್ಲಿಯೇ ವಿರಾಟ್‌ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೂಡ ಆಫ್ರಿಕಾ ಮಾಜಿ ನಾಯಕನ ಹೆಸರಿನಲ್ಲಿದೆ. 2015ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 133* ರನ್‌ ಹಾಗೂ 2016ರ ಆವೃತ್ತಿಯಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧ ಅಜೇಯ 129 ರನ್‌ ಸಿಡಿಸಿದ್ದರು. ಈ ಎರಡೂ ಇನಿಂಗ್ಸ್‌ಗಳು ಎಬಿಡಿ ಪಾಲಿಗೆ ಅತ್ಯಂತ ಶ್ರೇಷ್ಠ ಐಪಿಎಲ್‌ ಇನಿಂಗ್ಸ್‌ಗಳಾಗಿವೆ.

ಈ ಕುರಿತು ಮಾತನಾಡಿರುವ ಅವರು, 'ಆರ್‌ಸಿಬಿ ಪರ ಆಡುವ ಸುದೀರ್ಘ ಮತ್ತು ಫಲಪ್ರದ ಸಮಯವನ್ನು ನಾನು ಹೊಂದಿದ್ದೇನೆ. ಸತತ 11 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದು, ಇದೀಗ ನಮ್ಮ ಹುಡುಗರನ್ನು ಬಿಟ್ಟು ಹೋಗುವುದು ನಿಜಕ್ಕೂ ಕಹಿಯಾಗಿದೆ. ಈ ಕಠಿಣ ನಿರ್ಧಾರವನ್ನು ಪ್ರಕಟಿಸುವ ಸಲುವಾಗಿ ನಾನು ದೀರ್ಘಾವಧಿಯಿಂದ ಚಿಂತಿಸಿದ್ದೇನೆ. ಅಂದಹಾಗೆ ಇನ್ನು ಮುಂದೆ ನನ್ನ ಗುಣಮಟ್ಟದ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತೇನೆ," ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com