ಅತಿಯಾದ ಆತ್ಮವಿಶ್ವಾಸ ಬೇಡ: ತಂಡಕ್ಕೆ ಪಾಕ್‌ ನಾಯಕ ಬಾಬರ್ ಆಜಂ ಎಚ್ಚರಿಕೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆದ್ದು ಬೀಗುತ್ತಿರುವ ಪಾಕಿಸ್ತಾನ ತಂಡದ ಸಹ ಆಟಗಾರರಿಗೆ ನಾಯಕ ಬಾಬರ್ ಆಜಂ ಎಚ್ಚರಿಕೆ ನೀಡಿದ್ದು, ಅತಿಯಾದ ಆತ್ಮ ವಿಶ್ವಾಸ ಬೇಡ ಎಂದು ಕಿವಿಮಾತು ಹೇಳಿದ್ದಾರೆ.
ಪಾಕಿಸ್ತಾನ ನಾಯಕ ಬಾಬರ್ ಅಜಂ ಭಾಷಣ
ಪಾಕಿಸ್ತಾನ ನಾಯಕ ಬಾಬರ್ ಅಜಂ ಭಾಷಣ

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆದ್ದು ಬೀಗುತ್ತಿರುವ ಪಾಕಿಸ್ತಾನ ತಂಡದ ಸಹ ಆಟಗಾರರಿಗೆ ನಾಯಕ ಬಾಬರ್ ಆಜಂ ಎಚ್ಚರಿಕೆ ನೀಡಿದ್ದು, ಅತಿಯಾದ ಆತ್ಮ ವಿಶ್ವಾಸ ಬೇಡ ಎಂದು ಕಿವಿಮಾತು ಹೇಳಿದ್ದಾರೆ.

ಪಂದ್ಯ ಗೆಲುವಿನ ಬಳಿಕ ಸಹ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಹೋದರರೇ.. ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗಿಲ್ಲ.. ತಂಡದ ಸಮಗ್ರ ಗೆಲುವು. ಈ ಗೆಲುವನ್ನು ಆನಂದಿಸಿ. ಆದರೆ... ಇದು ಕೇವಲ ಆರಂಭ ಮಾತ್ರ ಎಂಬುದನ್ನು ನೆನಪಿಡಿ. ಅತಿಯಾದ ಆತ್ಮ ವಿಶ್ವಾಸ ಬೇಡ. ಮುಂದಿನ ಪಂದ್ಯಗಳತ್ತ ಗಮನ ಹರಿಸೋಣ. ನಮ್ಮೆಲ್ಲರ ಗುರಿ ಒಂದೇ.. ವಿಶ್ವಕಪ್ ಗೆಲ್ಲುವ ಗುರಿ. ಈಗ ನಾವು ಗೆದ್ದಿದ್ದೇವೆ ಎಂದು ಸಂಪೂರ್ಣ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಹಾಗೂ ಫೀಲ್ಡರ್‌ ಗಳು ನೂರಕ್ಕೆ ನೂರರಷ್ಟು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಅಂತೆಯೇ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಸಂದರ್ಭದಲ್ಲಿ ತಂಡವನ್ನು ಅಭಿನಂದಿಸಿ ಶುಭಾಶಯ ತಿಳಿಸಿದರು. ಆದರೆ, ಮುಂದೆ ಹೇಗೆ ಸಾಗಬೇಕು ಎಂಬ ಅಂಶದ ಬಗ್ಗೆ ಅವರು ಮಾರ್ಗದರ್ಶನ ನೀಡಿದರು. ಅದೇ ಸಮಯದಲ್ಲಿ, ಆತ್ಮವಿಶ್ವಾಸ ಮಾತ್ರ ಇರಬೇಕು ಅತಿಯಾದ ಆತ್ಮ ವಿಶ್ವಾಸವಿದ್ದರೆ ಮುಂದಿನ ಪಂದ್ಯಗಳಲ್ಲಿ ಪತನ ಖಂಡಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 'ನಿಮ್ಮೆಲ್ಲರಿಗೂ ಮತ್ತೊಮ್ಮೆ ಮನವಿ ಮಾಡುತ್ತೇನೆ ... ಅತಿ ಆತ್ಮವಿಶ್ವಾಸ ಮಾತ್ರ ಬೇಡವೇ ಬೇಡ .. ಪದೇ ಪದೇ ಏಕೆ ಈ ವಿಷಯ ಹೇಳುತ್ತಿರುವೆ ಎಂದರೆ ಅಸ್ಥಿರತೆಯಿಂದ ಎಡವಿ ಬೀಳುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ನಾವು ಈ ಅಪವಾದವನ್ನು ಅಳಿಸಬೇಕಾಗಿದೆ. ಇಂದು ನಾವು ತಂಡವಾಗಿ ಸಾಧಿಸಿದ ಯಶಸ್ಸು ಎಂದಿಗೂ ಮರೆಯಲಾಗದು. "ವೆಲ್ಡನ್," ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com