ಲಂಡನ್: ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಆಂಗ್ಲಪಡೆಯನ್ನು ಸೋಲಿಸುವ ಮೂಲಕ ಕೊಹ್ಲಿ ಈ ಅಪರೂಪದ ದಾಖಲೆ ನಿರ್ಮಿಸಿದ್ದು, ಅತೀ ಹೆಚ್ಚು ಸೆನಾ(SENA) ಗೆಲುವು ಪಡೆದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇಷ್ಟಕ್ಕೂ ಏನಿದು ಸೆನಾ (SENA)....!!
ಸೆನಾ ಎಂಬುದು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಶಾರ್ಟ್ ಫಾರ್ಮ್... ಭಾರತ ಕ್ರಿಕೆಟ್ ತಂಡದ ನಾಯಕ ಈ ನಾಲ್ಕು ದೇಶಗಳ ವಿರುದ್ಧ ಅತೀ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನಿಯಾಗಿದ್ದಾರೆ. ಈ ನಾಲ್ಕು ದೇಶಗಳ ವಿರುದ್ಧ ಕೊಹ್ಲಿ ಒಟ್ಟು 6 ಗೆಲುವು ಸಾಧಿಸಿದ್ದಾರೆ. ಈ ಆರು ಗೆಲುವುಗಳ ಪೈಕಿ ಮೂರು ಗೆಲುವು ಇಂಗ್ಲೆಂಡ್ ನಲ್ಲಿ, ಆಸ್ಟ್ರೇಲಿಯಾದಲ್ಲಿ 2 ಮತ್ತು ದಕ್ಷಿಣ ಆಫ್ರಿಕಾದಲ್ಲಿ 1 ಗೆಲುವು ಸಾಧಿಸಿದ್ದಾರೆ.
2019ರಲ್ಲೇ ಧೋನಿ ದಾಖಲೆ ಮುರಿದಿದ್ದ ಕೊಹ್ಲಿ
ಇನ್ನು ಕೊಹ್ಲಿ 2019ರಲ್ಲೇ ಭಾರತದ ಅತ್ಯಂತ ಯಶಸ್ವೀ ನಾಯಕ ಎಂಬ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದಿದ್ದರು. ಅತೀ ಹೆಚ್ಚು ಗೆಲುವು ಕಂಡ ಭಾರತದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನಿಯಾಗಿದ್ದಾರೆ. 2ನೇ ಸ್ಥಾನದಲ್ಲಿ ಕಪಿಲ್ ದೇವ್ ಇದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 2018ರಲ್ಲಿ ಒಂದು ಪಂದ್ಯ ಗೆದ್ದಿದ್ದ ಕೊಹ್ಲಿ ಇದೀಗ 2 ಪಂದ್ಯಗಳ ಗೆಲುವಿನ ಮೂಲಕ ಒಟ್ಟು ಗೆಲುವಿನ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ. ಈ ಹಿಂದೆ ಕಪಿಲ್ ದೇವ್ 2 ಟೆಸ್ಟ್ ಗೆದ್ದಿರುವುದು ಶ್ರೇಷ್ಠ ಸಾಧನೆಯಾಗಿತ್ತು. ಇದಲ್ಲದೇ ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಅಜಿತ್ ವಾಡೇಕರ್ ತಲಾ ಒಂದು ಟೆಸ್ಟ್ ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ.
50 ವರ್ಷಗಳ ಬಳಿಕ ಭರ್ಜರಿ ಗೆಲುವು
ಓವಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿದೆ. ಇದರೊಂದಿಗೆ 50 ವರ್ಷಗಳ ಬಳಿಕ ಭಾರತ ತಂಡವು ಓವಲ್ ಮೈದಾನದಲ್ಲಿ ಗೆಲುವಿನ ರುಚಿ ಸವಿದಿದೆ. ಈ ಮೈದಾನದಲ್ಲಿ ಕೊನೆಯ ಬಾರಿ ಭಾರತ ಗೆದ್ದಿದ್ದು 1971 ರಲ್ಲಿ. ಆ ಬಳಿಕ ಯಾವತ್ತೂ ಇಂಗ್ಲೆಂಡ್ ತಂಡ ಓವಲ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಸೋತಿರಲಿಲ್ಲ. ಇದೀಗ ಕೊಹ್ಲಿ ಪಡೆ 157 ರನ್ಗಳ ಭರ್ಜರಿ ಜಯ ದಾಖಲಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
3 ಟೆಸ್ಟ್ ಪಂದ್ಯಗಳನ್ನು ಗೆದ್ದ ಚೊಚ್ಚಲ ಏಷ್ಯಾ ನಾಯಕ
ಓವಲ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸುವುದರ ಮೂಲಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಏಷ್ಯಾ ಖಂಡದ ಮೊದಲ ಕ್ರಿಕೆಟ್ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದಂತೆ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಕಪಿಲ್ ದೇವ್ ನಾಯಕತ್ವದಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
2007ರ ನಂತರ ಇಂಗ್ಲೆಂಡ್ ನೆಲದಲ್ಲಿ ಸರಣಿ ಸೋಲದ ಭಾರತದ ನಾಯಕ
2007ರ ನಂತರ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಎಲ್ಲಾ ಸರಣಿಯಲ್ಲಿಯೂ ಸಹ ಟೀಮ್ ಇಂಡಿಯಾ ಟ್ರೋಫಿಯನ್ನು ಸೋತು ತವರಿಗೆ ವಾಪಸ್ ಆಗಿತ್ತು. ಆದರೆ ಈ ಬಾರಿ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಸರಣಿ ಸೋಲಿನಿಂದ ದೂರ ಸರಿದಿದೆ. ಹೀಗಾಗಿ ಐದನೇ ಪಂದ್ಯವನ್ನು ಸಹ ಟೀಮ್ ಇಂಡಿಯಾ ಗೆದ್ದರೆ ಟ್ರೋಫಿ ಭಾರತದ ಪಾಲಾಗಲಿದೆ ಅಥವಾ ಇಂಗ್ಲೆಂಡ್ ಜಯಗಳಿಸಿದರೆ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಈ ಕಾರಣದಿಂದಾಗಿ 2007ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟ್ರೋಫಿಯನ್ನು ಸೋಲದೇ ಉಳಿಸಿಕೊಳ್ಳುತ್ತಿರುವ ಮೊದಲ ಭಾರತದ ನಾಯಕ ಎಂಬ ಕೀರ್ತಿಗೂ ಸಹ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
Advertisement