ಕ್ರಿಕೆಟ್: ನವೆಂಬರ್ ನಲ್ಲಿ ನ್ಯೂಜಿಲೆಂಡ್, ಫೆಬ್ರವರಿಯಲ್ಲಿ ಶ್ರೀಲಂಕಾ ತಂಡದಿಂದ ಭಾರತ ಪ್ರವಾಸ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ ಆಂತಿಮಗೊಳಿಸಿದೆ.
ಬಿಸಿಸಿಐ
ಬಿಸಿಸಿಐ

ನವದೆಹಲಿ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ ಆಂತಿಮಗೊಳಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸೋಮವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅಂತಾರಾಷ್ಟ್ರೀಯ ಹೋಮ್ ಸೀಸನ್ 2021-22 ವೇಳಾಪಟ್ಟಿಯನ್ನು ಅಂಗೀಕರಿಸಿದೆ. ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಲಿದೆ. ಹೋಮ್ ಸೀಸನ್ ನವೆಂಬರ್ 17 ರಂದು ಜೈಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟಿ 20 ಪಂದ್ಯದೊಂದಿಗೆ ಆರಂಭವಾದರೆ, ಜೂನ್ 19 ರಂದು ರಾಷ್ಟ್ರ ರಾಜಧಾನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20ಪಂದ್ಯದೊಂದಿಗೆ ಕೊನೆಗೊಳ್ಳುತ್ತದೆ.

ಭಾರತ-ನ್ಯೂಜಿಲೆಂಡ್ ಸರಣಿಯು ನವೆಂಬರ್ 17 ರಂದು ಜೈಪುರದಲ್ಲಿ ಆರಂಭಿಕ ಟಿ 20 ಪಂದ್ಯದೊಂದಿಗೆ ಆರಂಭವಾಗಲಿದೆ. ಬಳಿಕ ರಾಂಚಿ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 19 ಮತ್ತು 21 ರಂದು 2 ಮತ್ತು 3ನೇ ಪಂದ್ಯಗಳು ನಡೆಯಲಿವೆ. ಬಳಿಕ ಎರಡು ಟೆಸ್ಟ್ ಪಂದ್ಯಗಳು ಕಾನ್ಪುರದಲ್ಲಿ (ನವೆಂಬರ್ 25 ರಿಂದ 29) ಮತ್ತು ಮುಂಬೈ ( ಡಿಸೆಂಬರ್ 3 ರಿಂದ 7) ನಲ್ಲಿ ನಡೆಯಲಿವೆ.

ವೆಸ್ಟ್ ಇಂಡೀಸ್ ಸರಣಿ
ಇನ್ನು ಭಾರತ-ವೆಸ್ಟ್ ಇಂಡೀಸ್ ಸರಣಿಯು ಏಕದಿನ ಪಂದ್ಯಗಳೊಂದಿಗೆ ಆರಂಭವಾಗಲಿದ್ದು, ಆರಂಭಿಕ ಪಂದ್ಯವು ಫೆಬ್ರವರಿ 6 ರಂದು ಅಹ್ಮದಾಬಾದ್ ನಲ್ಲಿ ನಡೆಯಲಿದೆ. ಎರಡನೇ ಮತ್ತು ಮೂರನೇ ಪಂದ್ಯಗಳು ಫೆಬ್ರವರಿ 9 ಮತ್ತು 12 ರಂದು ಜೈಪುರ ಮತ್ತು ಕೋಲ್ಕತಾದಲ್ಲಿ ನಡೆಯಲಿದೆ. ನಂತರ ಟಿ 20 ಪಂದ್ಯಗಳು ಆರಂಭವಾಗಲಿದ್ದು, ಫೆಬ್ರವರಿ 15 ರಂದು ಕಟಕ್‌ನಲ್ಲಿ ಆರಂಭಿಕ ಪಂದ್ಯ ನಡೆಯಲಿದ್ದು, ಎರಡನೇ ಮತ್ತು ಮೂರನೇ ಪಂದ್ಯಗಳು ಫೆಬ್ರವರಿ 18 ಮತ್ತು 20 ರಂದು ವಿಶಾಖಪಟ್ಟಣ ಮತ್ತು ತಿರುವನಂತಪುರದಲ್ಲಿ ನಡೆಯಲಿದೆ.

ಶ್ರೀಲಂಕಾ ಸರಣಿ
ಭಾರತ-ಶ್ರೀಲಂಕಾ ಸರಣಿಯು ಬೆಂಗಳೂರಿನಲ್ಲಿ (ಫೆಬ್ರವರಿ 25 ರಿಂದ ಮಾರ್ಚ್ 1) ಆರಂಭವಾಗಲಿದ್ದು, ಬಳಿಕ ಮೊಹಾಲಿಯಲ್ಲಿ (ಮಾರ್ಚ್ 5 ರಿಂದ 9) ಎರಡನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಯೋಜಿಸಲಾಗಿದ್ದು, ಮೊಹಾಲಿ (ಮಾರ್ಚ್ 13), ಧರ್ಮಶಾಲಾ (ಮಾರ್ಚ್ 15) ಮತ್ತು ಲಕ್ನೋ (ಮಾರ್ಚ್ 18) ನಲ್ಲಿ ಈ ಮೂರು ಟಿ 20 ಪಂದ್ಯಗಳು ನಡೆಯಲಿವೆ.

ದಕ್ಷಿಣ ಆಫ್ರಿಕಾ ಸರಣಿ
ಇದರ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಐದು ಪಂದ್ಯಗಳ ಟಿ 20 ಸರಣಿ ನಡೆಯಲಿದೆ. ಚೆನ್ನೈ (ಜೂನ್ 9), ಬೆಂಗಳೂರು (ಜೂನ್ 12), ನಾಗ್ಪುರ (ಜೂನ್ 14), ರಾಜ್‌ಕೋಟ್ (ಜೂನ್ 17) ಮತ್ತು ದೆಹಲಿಯಲ್ಲಿ (ಜೂನ್ 19) ಪಂದ್ಯಗಳು ನಡೆಯಲಿವೆ.

ಇದೇ ವೇಳೆ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಅಂಡರ್-16 ಮತ್ತು ಅಂಡರ್ 19 ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವ ನಿರ್ಧಾರವನ್ನು ಕೋವಿಡ್ -19 ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ತೆಗೆದುಕೊಳ್ಳಲು ನಿರ್ಧರಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com