
ಚಟ್ಟೋಗ್ರಾಮ್: ಬಾಂಗ್ಲಾದೇಶದ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದು, ಆಸಿಸ್ ದೈತ್ಯ ರಿಕಿ ಪಾಂಟಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತ್ತು. ಇಶಾನ್ ಕಿಶನ್ ಅವರು ದ್ವಿಶತಕ (210) ಸಿಡಿಸಿದರೆ, ಕೊಹ್ಲಿ ಶತಕ (113) ಗಳಿಸಿದರು. 131 ಎಸೆತಗಳಲ್ಲಿ ಇಶಾನ್ ಕಿಶನ್ 10 ಸಿಕ್ಸರ್ ಮತ್ತು 24 ಬೌಂಡರಿಗಳ ನೆರವಿನಿಂದ 210 ರನ್ ಸಿಡಿಸಿದರೆ, 91 ಎಸೆತಗಳಲ್ಲಿ ವಿರಾಟ್ ಕೊಹ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದರು.
ಇದು ಕೊಹ್ಲಿ ಅವರ 72ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಏಕದಿನ ಕ್ರಿಕೆಟ್ ನ 44ನೇ ಶತಕವಾಗಿದೆ. ಈ ಮೂಲಕ ಕೊಹ್ಲಿ ಬರೊಬ್ಬರಿ 3 ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ 3 ವರ್ಷಗಶ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಲ್ಲಿ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೂ ಮುನ್ನ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಫ್ಘಾನಿಸ್ತಾನದ ವಿರುದ್ಧ ಟಿ20 ಮಾದರಿಯಲ್ಲಿ ಶತಕ ಸಿಡಿಸಿ ಶತಕದ ಕೊರತೆಯನ್ನು ನೀಗಿಸಿದ್ದರು. ಇದೀಗ ಏಕದಿನ ಮಾದರಿಯಲ್ಲಿಯೂ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ಬರೊಬ್ಬರಿ 1214 ದಿನಗಳ ಬಳಿಕ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಶತಕದ ಸಾಧನೆ ಮಾಡಿದ್ದಾರೆ.
ಪಾಂಟಿಂಗ್ ದಾಖಲೆ ಹಿಂದಿಕ್ಕಿದ ಕೊಹ್ಲಿ
2019ರ ಬಳಿಕ ವಿರಾಟ್ ಕೊಹ್ಲಿ ನಾಲ್ಕು ಬಾರಿ ಶತಕದ ಅಂಚಿಗೆ ಬಂದು ತಲುಪಿದ್ದರು. ಆದರೆ ಮೂರಂಕಿಯ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಕೊಹ್ಲಿ ತಮ್ಮ 72ನೇ ಅಂತಾರಾಷ್ಟ್ರೀ ಶತಕವನ್ನು ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿದ ಕೊಹ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ.
Advertisement