5ನೇ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ, ಸರಣಿ ಕೈ ವಶಕ್ಕೆ ಭಾರತ ಹೋರಾಟ
ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಭಾರತದ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಚೋಕ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಮೇಲುಗೈ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಬುಮ್ರಾ ಪಡೆ ಸಜ್ಜಾಗಿದೆ.
ಇನ್ನು ಒಂಬತ್ತು ತಿಂಗಳುಗಳ ಹಿಂದೆ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2–1ರ ಮುನ್ನಡೆ ಸಾಧಿಸಿತ್ತು. ಕೊನೆಯ ಟೆಸ್ಟ್ ಸಮಯಕ್ಕೆ ಆಟಗಾರರನ್ನು ಕೋವಿಡ್ ಕಾಡಿತ್ತು. ಅದರಿಂದಾಗಿ ಆ ಪಂದ್ಯವನ್ನು ಈಗ ಆಯೋಜಿಸಲಾಗುತ್ತಿದೆ. ಆಗ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ್ದರು. ನಂತರದ ಬೆಳವಣಿಗೆಯಲ್ಲಿ ರೋಹಿತ್ ಶರ್ಮಾ ನಾಯಕರಾದರು. ಇದೀಗ ಅವರಿಗೆ ಕೋವಿಡ್ ಖಚಿತವಾಗಿರುವುದರಿಂದ ಪ್ರತ್ಯೇಕವಾಸಕ್ಕೆ ತೆರಳಿದ್ದಾರೆ. ಉಪನಾಯಕ ಕೆ.ಎಲ್. ರಾಹುಲ್ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ. ಅದರಿಂದಾಗಿ ವೇಗಿ ಜಸ್ ಪ್ರೀತ್ ಬೂಮ್ರಾಗೆ ನಾಯಕತ್ವದ ಹೊಣೆ ವಹಿಸಲಾಗಿದೆ.
ಪಿಚ್ ರಿಪೋರ್ಟ್
ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಮೈದಾನವು ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ಅನುಕೂಲಕರವಾಗಿದೆ. ಆದರೆ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಇದಕ್ಕೆ ಹಿಂದಿನ ದಾಖಲೆಗಳೇ ಕಾರಣ. ಮೊದಲ ದಿನದ ಆಟ ಇಲ್ಲಿನ ವೇಗಿಗಳಿಗೆ ಉತ್ತಮ ಸ್ವಿಂಗ್ ಆಗಿತ್ತು. ಅದೇ ರೀತಿ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ಎಡವುತ್ತಾರೆ. ಸರಾಸರಿಯಾಗಿ, ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು 300+ ರನ್ ಗಳಿಸುತ್ತದೆ. 300 ರನ್ ದಾಟುವುದೊಂದೇ ಗೆಲ್ಲುವ ಅವಕಾಶ.
ಈ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಇದುವರೆಗೂ 53 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಇಂಗ್ಲೆಂಡ್ 28 ಪಂದ್ಯಗಳನ್ನು ಗೆದ್ದಿದ್ದರೆ, ಪ್ರವಾಸಿ ತಂಡವು 10 ಬಾರಿ ಪಂದ್ಯ ಗೆದ್ದಿದೆ. ಇನ್ನುಳಿದ 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ತಂಡ 18 ಪಂದ್ಯಗಳನ್ನು ಗೆದ್ದಿದೆ ಮತ್ತು ಎರಡನೇ ಬ್ಯಾಟಿಂಗ್ ಮಾಡಿದ ತಂಡ 20 ಬಾರಿ ಗೆದ್ದಿದೆ. ಬೌಲಿಂಗ್ ವಿಷಯದಲ್ಲಿ ಭಾರತ ನಾಲ್ಕು ಬೌಲರ್‌ಗಳೊಂದಿಗೆ ಕಣಕ್ಕಿಳಿದಿದ್ದು, ಇಂಗ್ಲೆಂಡ್ ತಂಡವು ಕೂಡ ಮೂವರು ಪ್ರಮುಖ ಬೌಲರ್, ಓರ್ವ ಆಲ್‌ರೌಂಡರ್ (ನಾಯಕ), ಓರ್ವ ಸ್ಪಿನ್ ಆಲ್‌ರೌಂಡರ್‌ನೊಂದಿಗೆ ಕಣಕ್ಕಿಳಿಯುತ್ತಿದೆ.
ತಂಡಗಳು
ಭಾರತ: ಜಸ್‌ಪ್ರೀತ್ ಬೂಮ್ರಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಪ್ರಸಿದ್ಧಕೃಷ್ಣ, ಕೋನಾ ಶ್ರೀಕರ್ ಭರತ್ (ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಉಮೇಶ್ ಯಾದವ್.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಅಲೆಕ್ಸ್ ಲೀಸ್, ಜಾಕ್ ಕ್ರಾಲಿ, ಒಲಿ ಪೊಪ್, ಜೊ ರೂಟ್, ಜಾನಿ ಬೆಸ್ಟೊ, ಸ್ಯಾಮ್ ಬಿಲಿಂಗ್ಸ್ (ವಿಕೆಟ್‌ಕೀಪರ್), ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ