ಟಿ20 ವಿಶ್ವಕಪ್: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನಕ್ಕೆ 4 ರನ್ ಗಳ ವಿರೋಚಿತ ಸೋಲು!

ಟಿ20 ವಿಶ್ವಕಪ್​ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ತಂಡ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.
ಆಫ್ಘಾನಿಸ್ತಾನಕ್ಕೆ ವಿರೋಚಿತ ಸೋಲು
ಆಫ್ಘಾನಿಸ್ತಾನಕ್ಕೆ ವಿರೋಚಿತ ಸೋಲು

ಅಡಿಲೇಡ್: ಟಿ20 ವಿಶ್ವಕಪ್​ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ತಂಡ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 169 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ ಆರಂಭಿಕ ಆಘಾತದ ಹೊರತಾಗಿಯೂ ರಷೀದ್ ಖಾನ್ (ಅಜೇಯ 48ರನ್), ನಾಯಕ ಗುಲ್ಬದೀನ್ ನಬಿ (39) ಮತ್ತು ಆರಂಭಿಕ ಆಟಗಾರ ಗುರ್ಬಾಜ್ (30) ಅವರ ಹೋರಾಟದ ಹೊರತಾಗಿಯೂ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಫ್ಘಾನ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಆಸೀಸ್ ಪರ ಇದ್ದ ಪಂದ್ಯವನ್ನು ಕೊನೆಯಲ್ಲಿ ರಶೀದ್ ಖಾನ್ ಆಫ್ಘಾನ್ ಪರ ವಾಲಿಸಿದ್ದರು. ಆದರೆ ಅವರ ಹೋರಾಟದ ರನ್ ಗಳಿಕೆಗೆ ಮತ್ತೊಂದು ತುದಿಯಲ್ಲಿದ್ದ ಬ್ಯಾಟರ್ ಗಳು ಸಾಥ್ ನೀಡಲಿಲ್ಲ. ಅಂತಿಮವಾಗಿ ಸ್ಪಿನ್ನರ್ ರಶೀದ್ ಖಾನ್ 23 ಎಸೆತಗಳಿಂದ ಮೂರು ಬೌಂಡರಿ ಹಾಗೂ 4 ಅಮೋಘ ಸಿಕ್ಸರ್ ಗಳು ಸೇರಿ 48 ರನ್ ಗಳಿಸಿ ಔಟಾಗದೆ ಉಳಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ವಿಫಲರಾದರು.

ರಹಮಾನುಲ್ಲಾ ಗುರ್ಬಾಜ್ (30) ಕೇನ್ ರಿಚರ್ಡ್‌ಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. 13 ಓವರ್ ಗಳಿಗೆ 99 ರನ್ ಗಳಿಸಿದ್ದ ಆಫ್ಘಾನ್ ದೊಡ್ಡ ಆಘಾತ ನೀಡಿದ್ದು ಆ್ಯಡಮ್ ಜಂಪಾ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಕಿತ್ತರು.  ಇದು ಆಫ್ಘಾನಿಸ್ತಾನಕ್ಕೆ ಮಾರಕವಾಗಿ ಪರಿಣಮಿಸಿತು.

ಆಸ್ಟ್ರೇಲಿಯಾ ಸೆಮೀಸ್ ಲೆಕ್ಕಾಚಾರ
'ಟೂರ್ನಿಯಲ್ಲಿ ಆಸಿಸ್ ಸೆಮೀಸ್ ಕನಸು ಜೀವಂತವಾಗಿದೆಯಾದರೂ, ಇಂಗ್ಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಸೋಲಬೇಕು ಅಥವಾ ಮಳೆ ಬಂದು ಆ ಪಂದ್ಯ ರದ್ದಾಗಬೇಕು. ಈಗಾಗಲೇ ಗ್ರೂಪ್ 1 ನಿಂದ ನ್ಯೂಜಿಲೆಂಡ್ ಸೆಮೀಸ್ ಹಂತಕ್ಕೇರಿದ್ದು, 2ನೇ ತಂಡವಾಗಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ನಡುವೆ ತೀವ್ರ ಪೈಪೋಟಿ ಇದೆ. ನಾಳೆ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆದ್ದರೆ, ಇಂಗ್ಲೆಂಡ್ ಸೆಮೀಸ್ ಗೇರಲಿದೆ. ಒಂದು ವೇಳೆ ಇಂಗ್ಲೆಂಡ್‌ ಸೋತರೆ ಆಸ್ಟ್ರೇಲಿಯಾ ಸೆಮೀಸ್ ಪಂದ್ಯವನ್ನಾಡಲಿದೆ. ಒಂದು ವೇಳೆ ಮಳೆ ಸುರಿದು ಯಾವುದೇ ಫಲಿತಾಂಶ ಬಾರದಿದ್ದರೆ ಆಗ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಿ ಆಸ್ಟ್ರೇಲಿಯಾ ಸೆಮಿಸ್‌ಗೆ ಹೋಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com