
ರೋಹಿತ್ ಶರ್ಮಾ
ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೆದೆರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಗುರುವಾರ ಸಿಡ್ನಿಯಲ್ಲಿ ನಡೆದ ಸೂಪರ್ 12 ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 10ನೇ ಓವರ್‌ನಲ್ಲಿ ಸಿಕ್ಸರ್ ಭಾರಿಸುವ ಮೂಲಕ ರೋಹಿತ್ ಶರ್ಮಾ ದಾಖಲೆ ನಿರ್ಮಿಸಿದ್ದು, T20 ವಿಶ್ವಕಪ್‌ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಭಾರತದ ಇನ್ನಿಂಗ್ಸ್ ನ 10 ಓವರ್ ನಲ್ಲಿ ರೋಹಿತ್ ಶರ್ಮಾ T20 ವಿಶ್ವಕಪ್‌ನಲ್ಲಿ ತಮ್ಮ 34ನೇ ಸಿಕ್ಸರ್ ಸಿಡಿಸಿದರು. ಆ ಮೂಲಕ 33 ಸಿಕ್ಸರ್ ಸಿಡಿಸಿರುವ ಯುವರಾಜ್ ಸಿಂಗ್ ರನ್ನು ಹಿಂದಿಕ್ಕಿ ಭಾರತದ ಪರ T20 ವಿಶ್ವಕಪ್‌ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಮೇಡೆನ್ ಓವರ್ ಮೂಲಕ ದಾಖಲೆ ಬರೆದ ಭುವನೇಶ್ವರ್ ಕುಮಾರ್
T20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಇದ್ದು ಅವರು ಒಟ್ಟು 63 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು, ಮೂರನೇ ಸ್ಥಾನದಲ್ಲಿ 33 ಸಿಕ್ಸರ್ ಬಾರಿಸಿರುವ ಯುವರಾಜ್ ಸಿಂಗ್ ಇದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (31 ಸಿಕ್ಸರ್) ಮತ್ತು ಶೇನ್ ವ್ಯಾಟ್ಸನ್ (31) ಅಗ್ರ ಐದು ಆಟಗಾರರ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ರನ್: ಕ್ರಿಸ್ ಗೇಯ್ಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಇದಕ್ಕೂ ಮೊದಲು ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದ ರೋಹಿತ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಅರ್ಧಶತಕಗಳ ನೆರವಿನಿಂದ ನೆದರ್ಲೆಂಡ್ ಗೆ 180ರನ್ ಗಳ ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ನೆದರ್ಲೆಂಡ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ 56ರನ್ ಗಳ ಅಂತರದಲ್ಲಿ ಸೋಲು ಕಂಡಿತು.