ಕೊನೆಗೂ ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್‌ ಪದಾರ್ಪಣೆ; ತಂದೆ ಸಚಿನ್ ಜೊತೆ ಹೊಸ ದಾಖಲೆ

ಐಪಿಎಲ್ ಒಪ್ಪಂದಕ್ಕೆ 2 ವರ್ಷದ ಹಿಂದೆಯೇ ಸಹಿ ಹಾಕಿದ್ದರೂ ಈ ವರೆಗೂ ಒಂದು ಪಂದ್ಯವನ್ನಾಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೊನೆಗೂ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದಾರೆ.
ಅರ್ಜುನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್

ಮುಂಬೈ: ಐಪಿಎಲ್ ಒಪ್ಪಂದಕ್ಕೆ 2 ವರ್ಷದ ಹಿಂದೆಯೇ ಸಹಿ ಹಾಕಿದ್ದರೂ ಈ ವರೆಗೂ ಒಂದು ಪಂದ್ಯವನ್ನಾಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೊನೆಗೂ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದಾರೆ.

ಹೌದು.. ಸಚಿನ್ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದಿದ್ದು, ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಕಣಕ್ಕಿಳಿದ ಎಡಗೈ ವೇಗದ ಬೌಲರ್‌ 24 ವರ್ಷದ ಅರ್ಜುನ್‌ ತೆಂಡೂಲ್ಕರ್‌ ತಮ್ಮ ಐಪಿಎಲ್‌ ವೃತ್ತಿಬದುಕು ಆರಂಭಿಸಿದ್ದಾರೆ.

ಹೊಟ್ಟೆ ಸಂಬಂಧಿಸಿತ ಅನಾರೋಗ್ಯ ಸಮಸ್ಯೆಗೆ ತುತ್ತಾಗಿರುವ ತಂಡದ ನಾಯಕ ರೋಹಿತ್ ಶರ್ಮಾ ಇಂದು ಕೊಂಚ ವಿಶ್ರಾಂತಿ ಪಡೆದಿದ್ದು, ನಾಯಕನ ಅನುಪಸ್ಥಿತಿಯಲ್ಲಿ ತಂಡದ ಹಂಗಾಮಿ ನಾಯಕ ಸೂರ್ಯ ಕುಮಾರ್ ಯಾದವ್ ಮುಂಬೈ ತಂಡವನ್ನು ಬೌಲಿಂಗ್ ನಲ್ಲಿ ಮುನ್ನಡೆಸಿದರು. ಮುಂಬೈ ಇಂಡಿಯನ್ಸ್‌ ತಂಡದ ಆಡುವ 11ರ ಬಳಗಕ್ಕೆ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದ್ದು, ರೋಹಿತ್‌ ಶರ್ಮಾ ಅವರಿಂದ ಕ್ಯಾಪ್‌ ಸ್ವೀಕರಿಸಿದ ಅರ್ಜುನ್‌ ತೆಂಡೂಲ್ಕರ್‌ ಮತ್ತು ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್‌ ಡುವಾನ್‌ ಯೆನ್ಸನ್‌ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

ಐಪಿಎಲ್ ಇತಿಹಾಸದಲ್ಲೇ ಮೊದಲು
ಇನ್ನು ಈ ಪದಾರ್ಪಣೆ ಮೂಲಕ ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಒಂದೇ ಫ್ರಾಂಚೈಸಿ ಪರ ಆಡಿದ ತಂದೆ-ಮಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪುತ್ರನಿಗೆ ಸಲಹೆ ನೀಡಿದ್ದ ಸಚಿನ್
ಪಂದ್ಯಕ್ಕೂ ಮುನ್ನ ಆನ್‌ ಫೀಲ್ಡ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ಮತ್ತು ಸಚಿನ್ ತೆಂಡೂಲ್ಕರ್‌ ಒಟ್ಟಾಗಿ ಕಾಣಿಸಿಕೊಂಡರು. ಪುತ್ರನ ಪದಾರ್ಪಣೆಯ ಬಗ್ಗೆ ತಿಳಿದಿದ್ದ ಮಾಸ್ಟರ್‌ ಬ್ಲಾಸ್ಟರ್‌ ಕೆಲ ಮಹತ್ವದ ಸಲಹೆಗಳನ್ನು ನೀಡುತ್ತಿರುವುದು ಕಂಡುಬಂದಿತು. ಅಂತೆಯೇ ಮುಂಬೈ ಪರ ಬೌಲಿಂಗ್‌ನಲ್ಲಿ ಇನಿಂಗ್ಸ್‌ ಆರಂಭಿಸಿದ ಎಡಗೈ ವೇಗಿ ಅರ್ಜುನ್‌ ತೆಂಡೂಲ್ಕರ್‌, ಮೊದಲ ಎರಡು ಓವರ್‌ಗಳಲ್ಲಿ 18 ರನ್‌ ಕೊಟ್ಟರು. ಹೊಸ ಚೆಂಡಿನಲ್ಲಿ ಉತ್ತಮ ಸ್ವಿಂಗ್‌ ತರುವ ಮೂಲಕ ಗಮನ ಸೆಳೆದರು.

"10 ವರ್ಷಗಳ ಅಂತರದಲ್ಲಿ ಒಂದೇ ಫ್ರಾಂಚೈಸ್‌ಗಾಗಿ ತಂದೆ ಮತ್ತು ಮಗ  ಆಡುತ್ತಿದ್ದಾರೆ. ಇದು ಐಪಿಎಲ್‌ನಲ್ಲಿ ಇತಿಹಾಸದಲ್ಲೇ ಮೊದಲನೆಯ ಘಟನೆ. ಶುಭವಾಗಲಿ ಅರ್ಜುನ್ ತೆಂಡೂಲ್ಕರ್" ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com