ಹಾಲಿ IPL ಟೂರ್ನಿ ಮೇಲೂ ಮ್ಯಾಚ್ ಫಿಕ್ಸಿಂಗ್ ಕರಿನೆರಳು: RCB ವೇಗಿ ಮಹಮದ್ ಸಿರಾಜ್ ಮಾಹಿತಿ!, ಓರ್ವನ ಬಂಧನ

ಹಾಲಿ ಐಪಿಎಲ್ ಟೂರ್ನಿ ಮೇಲೂ ಮ್ಯಾ ಫಿಕ್ಸಿಂಗ್ ಭೂತದ ಕರಿನೆರಳು ಬಿದ್ದಿದ್ದು, ಬುಕ್ಕಿಯೋರ್ವ ತನ್ನನ್ನು ಸಂಪರ್ಕಿಸಿದ್ದ ಎಂದು ಆರೋಪಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮಹಮದ್ ಸಿರಾಜ್ ಬಿಸಿಸಿಐಗೆ ದೂರು ನೀಡಿದ್ದಾರೆ.
ಮಹಮದ್ ಸಿರಾಜ್
ಮಹಮದ್ ಸಿರಾಜ್
Updated on

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿ ಮೇಲೂ ಮ್ಯಾಚ್ ಫಿಕ್ಸಿಂಗ್ ಭೂತದ ಕರಿನೆರಳು ಬಿದ್ದಿದ್ದು, ಬುಕ್ಕಿಯೋರ್ವ ತನ್ನನ್ನು ಸಂಪರ್ಕಿಸಿದ್ದ ಎಂದು ಆರೋಪಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮಹಮದ್ ಸಿರಾಜ್ ಬಿಸಿಸಿಐಗೆ ದೂರು ನೀಡಿದ್ದಾರೆ.

ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಎಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಭಾರತದ ಸ್ಟಾರ್  ವೇಗಿ ಮುಹಮ್ಮದ್ ಸಿರಾಜ್(Mohammed Siraj) ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ (ಎಸಿಯು) ದೂರು ನೀಡಿದ್ದಾರೆ. ಚಾಲಕನೆಂದು ಹೇಳಿಕೊಂಡಿರುವ  ಅಪರಿಚಿತ ವ್ಯಕ್ತಿಯೊಬ್ಬ ಸಿರಾಜ್ ರನ್ನು ಸಂಪರ್ಕಿಸಿ  ಆರ್‌ಸಿಬಿ ತಂಡದ  ಆಂತರಿಕ ಮಾಹಿತಿಯನ್ನು ಕೇಳಿದ್ದಾನೆ ಎಂದು ಹೇಳಲಾಗಿದೆ.

ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ನಂತರ ಚಾಲಕರೊಬ್ಬರು ಸಿರಾಜ್ ಅವರನ್ನು ಸಂಪರ್ಕಿಸಿ ತಂಡದ ಆಂತರಿಕ ಮಾಹಿತಿ ಪಡೆಯಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮಹಮದ್ ಸಿರಾಜ್ ಕೂಡ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ದೂರು ನೀಡಿದ್ದು, ದೂರಿನಲ್ಲಿ, 'ಈ ಚಾಲಕ ಸಿರಾಜ್‌ಗೆ ತಂಡದ ಒಳಗಿನ ವಿಷಯಗಳನ್ನು ಹೇಳಿದರೆ, ಭಾರಿ ಮೊತ್ತದ ಹಣ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದ. ಆದರೆ ಸಿರಾಜ್ ಅವರು ಇದಕ್ಕೆ ಒಪ್ಪಿರಲಿಲ್ಲ ಎಂದು ಹೇಳಲಾಗಿದೆ. 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ಎಸಿಯು) ಸಂಪೂರ್ಣ ವಿಷಯವನ್ನು ತಿಳಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಠಿಣ ನೀತಿ ಸಂಹಿತೆಯನ್ನು ಹೊಂದಿದೆ. ಒಬ್ಬ ಆಟಗಾರ ಅಥವಾ ಅಧಿಕಾರಿಯು ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ ಕುರಿತು ಮಾಹಿತಿ ನೀಡಲು ವಿಫಲವಾದರೆ ಅವರು ಕೂಡ ಶಿಕ್ಷೆಗೆ ಗುರಿಯಾಗುತ್ತಾರೆ.

ಬಿಸಿಸಿಐ ಸ್ಪಷ್ಟನೆ
ಸಿರಾಜ್ ದೂರನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದೆ ಎಂದು ತಿಳಿದುಬಂದಿದೆ. ಅಲ್ಲದೆ ಸಿರಾಜ್ ರನ್ನು ಸಂಪರ್ಕಿಸಿದ ಚಾಲಕನನ್ನು ಕೂಡ ಬಂಧಿಸಲಾಗಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಆತ ತಾನು ಬುಕ್ಕಿ ಅಲ್ಲ.. ಬದಲಿಗೆ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡವನು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹೈದರಾಬಾದ್ ಮೂಲದ ಚಾಲಕ ಪಂದ್ಯಗಳ ಬೆಟ್ಟಿಂಗ್ ವ್ಯಸನಿಯಾಗಿದ್ದು, ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮಾಡುತ್ತಿರುತ್ತಾನೆ. ಬೆಟ್ಟಿಂಗ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಈ ಕಾರಣಕ್ಕಾಗಿ ತಂಡದ ಒಳ ಮಾಹಿತಿಗಾಗಿ ಸಿರಾಜ್ ಅವರನ್ನು ಸಂಪರ್ಕಿಸಿದ್ದ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಂತೆಯೇ ಮ್ಯಾಚ್ ಫಿಕ್ಸಿಂಗ್ ವಿಚಾರವಾಗಿ ಬಿಸಿಸಿಐ ಗಂಭೀರ ಕ್ರಮಗಳನ್ನು ಕೈಗೊಂಡಿದ್ದು, ಐಪಿಎಲ್ ಸರಣಿಯುದ್ದಕ್ಕೂ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ (ACU) ಅಧಿಕಾರಿಗಳು ಪ್ರತಿ ತಂಡದೊಂದಿಗೆ ಇರುತ್ತಾರೆ. ಅವರು ಆಟಗಾರರ ಜೊತೆಗೆ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ. ಆಟಗಾರರ ಪ್ರತಿ ಚಟುವಟಿಕೆಯನ್ನು ಅವರು ಮೇಲ್ವಿಚಾರಣೆ ಮಾಡುತ್ತಾನೆ. ಪ್ರತಿ ಆಟಗಾರನಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಆಟಗಾರರು ಮಾಹಿತಿ ನೀಡಲು ಸಾಧ್ಯವಾಗದಿದ್ದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇನ್ನು ಐಪಿಎಲ್‌ನಲ್ಲಿ ಫಿಕ್ಸಿಂಗ್ ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ಆಟಗಾರರ ತಲೆದಂಡವಾಗಿದೆ. ಮಾಜಿ ವೇಗದ ಬೌಲರ್‌ಗಳಾದ ಎಸ್ ಶ್ರೀಶಾಂತ್, ಅಕಿಂತ್ ಚವಾಣ್ ಮತ್ತು ಅಜಿತ್ ಚಾಂಡಿಲಾ ಅವರನ್ನೂ ಬಂಧಿಸಲಾಗಿತ್ತು. ಈ ಮೂವರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರನ್ನು ಕೂಡ ಬಂಧಿಸಲಾಗಿತ್ತು. ಅಂದಿನಿಂದ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ತಂಡವು ತುಂಬಾ ಜಾಗರೂಕವಾಗಿದೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಕಳೆದ ಐಪಿಎಲ್ ಋತುವಿನಲ್ಲಿ ಬುಕ್ಕಿ ಸಂಪರ್ಕ ಮಾಡಿದ್ದ ವಿಚಾರವನ್ನು ಗೌಪ್ಯವಾಗಿರಿಸಿದ ಕಾರಣ 2021 ರಲ್ಲಿ ಅಮಾನತುಗೊಂಡಿದ್ದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com