ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕ

ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕವಾಗಿದ್ದಾರೆ.
ಅಜಿತ್ ಅಗರ್ಕರ್
ಅಜಿತ್ ಅಗರ್ಕರ್

ಮುಂಬೈ: ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕವಾಗಿದ್ದಾರೆ.

ಹೌದು.. ಭಾರತದ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಈ ಹಿಂದಿನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ ರಾಜಿನಾಮೆ ಬಳಿಕ ತೆರವಾಗಿದ್ದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 45 ವರ್ಷದ ಅಗರ್ಕರ್  ಅವರನ್ನು ಬಿಸಿಸಿಐ ನೇಮಕ ಮಾಡಿದೆ.

ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಅಂತಿಮ ಪಟ್ಟಿಯನ್ನು ರಚಿಸಲಾಗಿತ್ತು. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಭ್ಯರ್ಥಿಗಳ ಸಂದರ್ಶನ ನಡೆಸಿದ ಬಳಿಕ ಅಜಿತ್‌ ಅಗರ್ಕರ್‌ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಆ ಮೂಲಕ ಅಗರ್ಕರ್, ಶಿವಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರೋತೊ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಯನ್ನು ಒಳಗೊಂಡಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಖಾಸಗಿ ವಾಹಿನಿಯೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್‌ನ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿದ್ದ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಚೇತನ್​ ಶರ್ಮಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ಬಳಿಕ ಕಳೆದ ಫೆಬ್ರವರಿ ತಿಂಗಳಿನಿಂದ ಮುಖ್ಯ ಆಯ್ಕೆಗಾರರ ಕುರ್ಚಿ ಖಾಲಿಯಾಗಿತ್ತು. 

191 ಏಕದಿನ ಪಂದ್ಯ ಹಾಗೂ 26 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ ಅನುಭವವಿರುವ ಅಗರ್ಕರ್, ಈ ಉನ್ನತ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದರು. ಒಂಬತ್ತು ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದ ಅವರು, 349 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. 2017ರಿಂದ 2019ರವರೆಗೆ, ಅಗರ್ಕರ್ ಅವರು ಮುಂಬೈ ರಣಜಿ ತಂಡದ ಆಯ್ಕೆಗಾರರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಿದ್ದ ಐಪಿಎಲ್‌ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸಹಾಯಕ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com