ICC Cricket World Cup 2023: ರಚಿನ್ ರವೀಂದ್ರ ಶತಕ, ಪಾಕಿಸ್ತಾನಕ್ಕೆ 402 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದ ನ್ಯೂಜಿಲೆಂಡ್

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ 401 ಬೃಹತ್ ಮೊತ್ತ ಪೇರಿಸಿದೆ.
ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಬ್ಯಾಟಿಂಗ್
ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಬ್ಯಾಟಿಂಗ್

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ 401 ಬೃಹತ್ ಮೊತ್ತ ಪೇರಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ ರಚಿನ್ ರವೀಂದ್ರರ ಶತಕ (108 ರನ್) ಮತ್ತು ನಾಯಕ ಕೇನ್ ವಿಲಿಯಮ್ಸನ್ (95 ರನ್) ಅರ್ಧಶತಕಗಳ ನೆರವಿನಿಂದ 401 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಮೊದಲ ವಿಕೆಟ್ ಗೆ ಡಿವಾನ್ ಕಾನ್ವೇ ಮತ್ತು ರಚಿನ್ ರವೀಂದ್ರ ಜೋಡಿ 68 ರನ್ ಗಳ ಭರ್ಜರಿ ಆರಂಭ ನೀಡಿತ್ತು. ಬಳಿಕ ಹಸನ್ ಅಲಿ ಬೌಲಿಂಗ್ ನಲ್ಲಿ ಕಾನ್ವೇ ಔಟಾಗುತ್ತಿದ್ದಂತೆಯೇ ನಾಯಕ ಕೇನ್ ವಿಲಿಯಮ್ಸನ್ ಅವರು ರವೀಂದ್ರ ಜೋತೆಗೂಡಿ ದಾಖಲೆಯ ಜೊತೆಯಾಟ ಆಡಿದರು. ಈ ಜೋಡಿ 2ನೇ ವಿಕೆಟ್ ಗೆ 180 ರನ್ ಗಳ ಅಮೋಘ ಜೊತೆಯಾಟವಾಡಿತು. ಈ ಹಂತದಲ್ಲಿ ರಚಿನ್ ರವೀಂದ್ರ ಶತಕ ಸಿಡಿಸಿದರೆ, 95 ರನ್ ಸಿಡಿಸಿ ಶತಕದ ಅಂಚಿನಲ್ಲಿದ್ದ ವಿಲಿಯಮ್ಸನ್ ಇಫ್ತಿಕಾರ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ  ರವೀಂದ್ರ ಕೂಡ 108 ರನ್ ಗಳಿಸಿ ಮಹಮದ್ ವಾಸಿಮ್ ಜೂನಿಯರ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್ ಗೆ ಆಗಮಿಸಿದ ಡರಿಸ್ ಮೆಚಿಲ್ (29 ರನ್), ಮಾರ್ಕ್ ಚಾಪ್ಮನ್ (39 ರನ್), ಗ್ಲೇನ್ ಫಿಲಿಪ್ಸ್ (41 ರನ್) ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 401 ರನ್ ಗಳಿಸಿ, ಪಾಕಿಸ್ತಾನಕ್ಕೆ ಗೆಲ್ಲಲು 402 ರನ್ ಗಳ ಬೃಹತ್ ಗುರಿ ನೀಡಿದೆ.

ಪಾಕಿಸ್ತಾನ ಪರ ಮಹಮದ್ ವಾಸಿಮ್ ಜೂನಿಯರ್ 3 ವಿಕೆಟ್ ಪಡೆದರೆ, ಹಸನ್ ಅಲಿ, ಇಫ್ತಿಕಾರ್ ಅಹ್ಮದ್ ಮತ್ತು ಹ್ಯಾರಿಸ್ ರಾವುಫ್ ತಲಾ 1 ವಿಕೆಟ್ ಪಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com