ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಕೊನೆಗೂ ಗೆಲುವಿನ ನಗೆ ಬೀರಿದ ಇಂಗ್ಲೆಂಡ್, ನೆದರ್ಲೆಂಡ್ಸ್ ವಿರುದ್ಧ 160 ರನ್ ಜಯ

ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ಟೂರ್ನಿಯಲ್ಲಿ ಸತತ ಸೋಲುಗಳಿಂದ ಕೆಂಗೆಟ್ಟು ಟೂರ್ನಿಯಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಗೂ ಗೆಲುವಿನ ನಗೆ ಬೀರಿದ್ದು, ನೆದರ್ಲೆಂಡ್ಸ್ ತಂಡದ ವಿರುದ್ಧ 160ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ಗೆ ಜಯ
ಇಂಗ್ಲೆಂಡ್ ಗೆ ಜಯ

ಪುಣೆ: ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ಟೂರ್ನಿಯಲ್ಲಿ ಸತತ ಸೋಲುಗಳಿಂದ ಕೆಂಗೆಟ್ಟು ಟೂರ್ನಿಯಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಗೂ ಗೆಲುವಿನ ನಗೆ ಬೀರಿದ್ದು, ನೆದರ್ಲೆಂಡ್ಸ್ ತಂಡದ ವಿರುದ್ಧ 160ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಪುಣೆಯಲ್ಲಿ ಇಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 340ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನೆದರ್ಲೆಂಡ್ಸ್ ತಂಡ 37.2 ಓವರ್ ನಲ್ಲಿ ಕೇವಲ 179 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಬರೊಬ್ಬರಿ 160ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ನೆದರ್ಲೆಂಡ್ ಪರ ವೆಸ್ಲಿ ಬ್ಯಾರೆಸಿ 37 ರನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33 ರನ್, ನಾಯಕ ಸ್ಕಾಟ್ ಎಡ್ವರ್ಡ್ಸ್ 38 ರನ್ ಮತ್ತು ತೇಜ ನಿಡಮನೂರು ಅಜೇಯ 41ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ನಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.

ಇಂಗ್ಲೆಂಡ್ ಪರ ಮೊಯಿನ್ ಅಲಿ ಮತ್ತು ಅದಿಲ್ ರಷೀದ್ ತಲಾ 3 ವಿಕೆಟ್ ಪಡೆದರೆ, ಡಿವಿಡ್ ವಿಲ್ಲೇ 2 ಮತ್ತು ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು.

ಬೆನ್ ಸ್ಟೋಕ್ಸ್ ಶತಕ; ಇಂಗ್ಲೆಂಡ್ ಬೃಹತ್ ಮೊತ್ತ
ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 339ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ (108 ರನ್) ಶತಕ ಗಳಿಸಿದರೆ, ಡೇವಿಡ್ ಮಲನ್ 87 ರನ್ ಗಳಿಸಿ ಕೇವಲ 13 ರನ್ ಗಳಿಂದ ಶತಕ ವಂಚಿತರಾದರು. ಅಂತಿಮ ಹಂತದಲ್ಲಿ ಕ್ರಿಸ್ ವೋಕ್ಸ್ (51 ರನ್) ಅರ್ಧಶತಕ ಗಳಿಸಿ ತಂಡದ ಮೊತ್ತ 300ರ ಗಡಿದಾಟುವಂತೆ ನೋಡಿಕೊಂಡರು.

ಟೂರ್ನಿಯಿಂದ ನೆದರ್ಲೆಂಡ್ಸ್ ಔಟ್, 7ನೇ ಸ್ಥಾನಕ್ಕೇರಿದ ಇಂಗ್ಲೆಂಡ್
ಈ ಪಂದ್ಯದ ಸೋಲಿನೊಂದಿಗೆ ನೆದರ್ಲೆಂಡ್ಸ್ ತಂಡ ಅಧಿಕೃತವಾಗಿ ವಿಶ್ವಕಪ್ ಟೂರ್ನಿಯ ಸೆಮೀಸ್ ರೇಸ್ ನಿಂದ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಅಂತೆಯೇ ಈ ಪಂದ್ಯದ ಗೆಲುವಿನೊಂದಿಗೆ ಇಷ್ಟು ದಿನ ಕೊನೆಯ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ 3 ಸ್ಥಾನ ಮೇಲೇರಿ 7ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯವನ್ನು ನವೆಂಬರ್ 11ರಂದು ಅಂದರೆ ಇದೇ ಶನಿವಾರ ಪಾಕಿಸ್ತಾನದ ವಿರುದ್ಧ ಆಡಲಿದೆ. ಸೆಮೀಸ್ ಕನಸು ಕಾಣುತ್ತಿರುವ ಪಾಕಿಸ್ತಾನಕ್ಕೆ ಈ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com