ಚಿನ್ನಸ್ವಾಮಿಯಲ್ಲಿ ಹಲವು ಹೈಡ್ರಾಮ; DRS ಗೆ ಅಡ್ಡಿಯಾದ 'ಕರೆಂಟ್ ಕಟ್'; ಮಾರ್ಷ್ ಗೆ ಬರ್ತ್ ಡೇ ವಿಶ್; ಮತ್ತೆ RCB, RCB ಕೂಗು!

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಕ್ರಿಕೆಟ್ ಹೊರತಾಗಿಯೂ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.
ಚಿನ್ನಸ್ವಾಮಿಯಲ್ಲಿ ಹೈಡ್ರಾಮ
ಚಿನ್ನಸ್ವಾಮಿಯಲ್ಲಿ ಹೈಡ್ರಾಮ

ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಕ್ರಿಕೆಟ್ ಹೊರತಾಗಿಯೂ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಕ್ರಿಕೆಟ್ ಹೊರತಾಗಿಯೂ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದು, ಪ್ರಮುಖವಾಗಿ ಭಾರತ ಮತ್ತು ಆಸ್ಟ್ರೇಲಿಯಾದ ಅಭಿಮಾನಿಗಳು ಒಂದಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಮಾರ್ಷ್ ಗೆ ಭಾರತದ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದು ಮತ್ತೊಂದು ವಿಶೇಷವಾಗಿತ್ತು.

ಮಾರ್ಷ್ ಗೆ ಬರ್ತ್ ಡೇ ವಿಶ್
ಪಾಕಿಸ್ತಾನದ ಬ್ಯಾಟಿಂಗ್ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಶಾನ್ ಮಾರ್ಷ್ ರನ್ನು ಉದ್ದೇಶಿಸಿ ಅಭಿಮಾನಿಗಳು 'Happy Birthday To you Marsh' ಎಂದು ಹಾಡು ಹೇಳಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಮಾರ್ಷ್ ತಮ್ಮ ಕೈ ಎತ್ತಿ ಧನ್ಯವಾದ ಅರ್ಪಿಸಿದರು.

ಮತ್ತೆ RCB, RCB ಕೂಗು
ವಿಶ್ವಕಪ್ ಟೂರ್ನಿಯಲ್ಲೂ ಬೆಂಗಳೂರಿನಲ್ಲಿ ಮತ್ತೆ RCB, RCB ಕೂಗು ಜೋರಾಗಿತ್ತು. ಆರ್ ಸಿಬಿ ತಂಡದಲ್ಲಿರುವ ಗ್ಲೇನ್ ಮ್ಯಾಕ್ಸ್ ವೆಲ್ ಕ್ರೀಸ್ ಗೆ ಇಳಿಯುತ್ತಿದ್ದಂತೆಯೇ ಅಭಿಮಾನಿಗಳು RCB, RCB ಎಂದು ಜೋರಾಗಿ ಕೂಗಿದರು. ಆದರೆ ವಿಪರ್ಯಾಸವೆಂದರೆ ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

DRSಗೆ ಅಡ್ಡಿಯಾದ 'ಕರೆಂಟ್ ಕಟ್'
ಆಸ್ಟ್ರೇಲಿಯಾ ನೀಡಿದ 368 ರನ್‌ಗಳ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟುತ್ತಿದ್ದ ವೇಳೆ ಪಾಕಿಸ್ತಾನ ಇನಿಂಗ್ಸ್‌ನ 16 ನೇ ಓವರ್‌ನಲ್ಲಿ, ಅಂಪೈರ್‌ಗಳು ಎರಡೂ ಕಡೆಯ ಕ್ರಿಕೆಟಿಗರಿಗೆ ವಿದ್ಯುತ್ ಕಡಿತ ದೋಷದಿಂದ DRS ಹಾಕ್-ಐ ಅಥವಾ ಅಲ್ಟ್ರಾಎಡ್ಜ್  ಸೌಕರ್ಯ ಇಲ್ಲ ಎಂದು ತಿಳಿಸಿದರು. DRS ಅನ್ನು ತೆಗೆದುಕೊಳ್ಳಬಹುದು, ಆದರೆ ಸಾಕ್ಷ್ಯವನ್ನು ಹುಡುಕಲು ಕೇವಲ ವಿಡಿಯೋ ತುಣುಕಿನ ಸ್ಲೋಮೋಷನ್ ಚಲನೆಯನ್ನು ಬಳಸಲಾಗುತ್ತದೆ ಎಂದು ಹೇಳಿದರು. ಕ್ರೀಡಾಂಗಣದ ಕಾರ್ಯನಿರ್ವಹಣೆಗೆ ಉಭಯ ತಂಡಗಳ ಅಭಿಮಾನಿಗಳು ಕಿಡಿಕಾರಿದ್ದಾರೆ.

ಭಾರತ್ ಮಾತಾ ಕೀ ಜೈ ಎಂದ ಆಸಿಸ್ ಅಭಿಮಾನಿಗಳು
ಇನ್ನು ಈ ಪಂದ್ಯದಲ್ಲಿ ಆಸಿಸ್ ಅಭಿಮಾನಿಗಳಿಗಿಂತ ಹೆಚ್ಚಾಗಿ ಭಾರತ ತಂಡದ ಅಭಿಮಾನಿಗಳು ಮೈದಾನದಲ್ಲಿದ್ದರು. ಅಲ್ಲದೆ ಆಸ್ಟ್ರೇಲಿಯಾ ತಂಡಕ್ಕೆ ಬೆಂಬಲ ನೀಡುವ ಮೂಲಕ ತಮ್ಮ ಐಪಿಎಲ್ ಅಭಿಮಾನವನ್ನು ತೋರಿದರು. ಅದರಲ್ಲೂ ಆಸ್ಟ್ರೇಲಿಯಾದ ಅಭಿಮಾನಿಗಳು ಭಾರತೀಯ ಅಭಿಮಾನಿಗಳೊಂದಿಗೆ ಸೇರಿ 'ಭಾರತ್ ಮಾತಾ ಕೀ ಜೈ.. ವಂದೇ ಮಾತರಂ ಎಂದು ಘೋಷಣೆ ಕೂಗಿದರು.

ಪಾಕ್ ಅಭಿಮಾನಿಗಳು ಎದೆ ಬಡಿತ ನಿಲ್ಲಿಸಿದ ಕ್ಯಾಚ್ ವಿಡಿಯೋ
ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಗೆ ಪಾಕಿಸ್ತಾನ ಕೂಡ ಉತ್ತಮ ತಿರುಗೇಟು ನೀಡಿತ್ತು. ಒಂದು ಹಂತದಲ್ಲಿ ಪಾಕಿಸ್ತಾನ ಮೊದಲ ವಿಕೆಟ್ ಗೇ 134ರನ್ ಗಳಿಸಿ ಗೆಲುವಿನತ್ತ ದಾಪುಗಾಲಿರಿಸಿತ್ತು. ಆದರೆ ಆರಂಭಿಕರು ಔಟಾಗಿ ಆತಂಕ ಮೂಡಿಸಿದರು. ಈ ಹಂತದಲ್ಲಿ ಕ್ರೀಸ್ ಗೆ ಇಳಿದಿದ್ದ ನಾಯಕ ಬಾಬರ್ ಆಜಂ ಕೆಲ ಉತ್ತಮ ಹೊಡೆತಗಳ ಮೂಲಕ ಮತ್ತೆ ಪಾಕ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಜಂಪಾ ಬೌಲಿಂಗ್ ನಲ್ಲಿ ಬಾಬರ್ ಆಜಂ ಕಮಿನ್ಸ್ ಗೆ ಕ್ಯಾಚ್ ನೀಡಿ ಔಟಾದರು. ಇದೊಂದು ಕ್ಯಾಚ್ ಪಾಕ್ ಅಭಿಮಾನಿಗಳ ಎದೆ ಬಡಿತದ ಮೇಲೆ ಪರಿಣಾಮ ಬೀರಿತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಪಾಕಿಸ್ತಾನ್ ಜಿಂದಾಬಾದ್ ಎಂದವನಿಗೆ ಪೊಲೀಸ್ ಎಚ್ಚರಿಕೆ
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನದ ಅಭಿಮಾನಿಯೋರ್ವ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದ. ಇದನ್ನು ಗಮನಿಸಿದ ಅಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಹಾಗೆ ಕೂಗದಂತೆ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಆತ, ಭಾರತ್ ಮಾತಾ ಕೀ ಜೈ ಎಂದರೆ ತಪ್ಪಿಲ್ಲ.. ನಾನು ಪಾಕಿಸ್ತಾನದ ಪ್ರಜೆ.. ಪಾಕಿಸ್ತಾನ್ ಜಿಂದಾಬಾದ್ ಎಂದರೆ ತಪ್ಪೇನು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಬಳಿಕ ಇತರೆ ಅಭಿಮಾನಿಗಳು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಆತ ಮಾತ್ರ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಪ್ರಶ್ನಿಸಿದ್ದಾನೆ.

ಸೋಲಿನ ಬಳಿಕ ಸುದ್ದಿಗೋಷ್ಠಿಗೆ ಬಾಬರ್ ಗೈರು: ವ್ಯಾಪಕ ಟ್ರೋಲ್
ಇನ್ನು ಈ ಪಂದ್ಯದ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಗೈರಾಗಿದ್ದರು. ಅವರ ಬದಲಿಗೆ ಅಬ್ದುಲ್ಲಾ ಶಫೀಕ್ ರನ್ನು ಕಳುಹಿಸಲಾಗಿತ್ತು. ಇದನ್ನೂ ಅಭಿಮಾನಿಗಳು ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ. ಇದೇ ಪಾಕಿಸ್ತಾನ ತಂಡದ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ 10 ವಿಕೆಟ್ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಅಂದು ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಅವರಿಗಿರುವ ಧೈರ್ಯವೂ ನಿಮಿಗಿಲ್ಲದೇ ಹೋಯಿತೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com