ICC Cricket World Cup 2023: ಇಂಗ್ಲೆಂಡ್ ಬೌಲರ್ ಗಳ ಪಾರಮ್ಯ; ಅಲ್ಪ ಮೊತ್ತಕ್ಕೆ ಕುಸಿದ ಭಾರತ

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಅಲ್ಪ ಮೊತ್ತ ಗಳಿಸಿದೆ.
ಇಂಗ್ಲೆಂಡ್ ಬೌಲರ್ ಗಳ ಎದುರು ಪರದಾಡಿದ ಭಾರತ
ಇಂಗ್ಲೆಂಡ್ ಬೌಲರ್ ಗಳ ಎದುರು ಪರದಾಡಿದ ಭಾರತ
Updated on

ಲಖನೌ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ (ICC Cricket World Cup 2023) ಟೂರ್ನಿಯ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ (England) ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಭಾರತ (Team India) ತಂಡ ಅಲ್ಪ ಮೊತ್ತ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲ್ಲಲು 230ರನ್ ಗಳ ಸಾಧಾರಣ ಗುರಿ ನೀಡಿದೆ. ಆರಂಭದಿಂದಲೇ ಇಂಗ್ಲೆಂಡ್ ಬೌಲರ್ ಗಳು ಲಖನೌ ಪಿಚ್ ನಲ್ಲಿ ಲಯ ಕಂಡುಕೊಂಡರು. ಪರಿಣಾಮ ಭಾರತ ತಂಡ ಕೇವಲ 40ರನ್ ಗಳ ಅಂತರದಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

ಆರಂಭಿಕ ಆಟಗಾರ ಶುಭ್ ಮನ್ ಗಿಲ್ (Shubhman Gill) ಕೇವಲ 7 ರನ್ ಗಳಿಸಿ ವೋಕ್ಸ್ ಗೆ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ವಿರಾಟ್ ಕೊಹ್ಲಿ  (Virat Kohli)ಶೂನ್ಯಕ್ಕೆ ಔಟಾಗುವ ಮೂಲಕ ಆಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಶ್ರೇಯಸ್ ಅಯ್ಯರ್ ಕೂಡ ಕೇವಲ 4ರನ್ ಗಳಿಸಿ ಔಟಾಗುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು.

ಈ ಹಂತದಲ್ಲಿ ಜೊತೆಯಾದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಕೆಎಲ್ ರಾಹುಲ್ (KL Rahul)ಜೋಡಿ ನಿಧಾನವಾಗಿ ಭಾರತ ತಂಡದ ಇನ್ನಿಂಗ್ಸ್ ಗೆ ಜೀವ ತುಂಬಿದರು. ರೋಹಿತ್ ಶರ್ಮಾ ಅರ್ಧಶತಕಗಳಿಸಿದ್ದು, ಅವರಿಗೆ ರಾಹುಲ್ ಉತ್ತಮ ಸಾಥ್ ನೀಡಿದರು. ಆದರೆ ರಾಹುಲ್ 39 ರನ್ ಗಳಿಸಿದ್ದಾಗ ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ತಮ್ಮ ಎಂದಿನ ಬ್ಯಾಟಿಂಗ್ ಮೂಲಕ ರನ್ ಗಳಿಸುವತ್ತ ಮಗ್ನರಾದರು.

ಈ ಹಂತದಲ್ಲಿ 87 ರನ್ ಗಳಿ ಶತಕದತ್ತ ಮುನ್ನುಗ್ಗುತ್ತಿದ್ದ ರೋಹಿತ್ ಶರ್ಮಾ ಅದಿಲ್ ರಶೀದ್ ಬೌಲಿಂಗ್ ನಲ್ಲಿ ಔಟಾಗಿದ್ದು ಭಾರತಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಮತ್ತೊಂದು ತುದಿಯಲ್ಲಿ ಸೂರ್ಯ ಕುಮಾರ್ ಯಾದವ್ 47 ಎಸೆತಗಳಲ್ಲಿ 49 ರನ್ ಗಳಿಸಿ ಇನ್ನಿಂಗ್ಸ್ ನ ಕೊನೆಯ 3 ಓವರ್ ಗಳು ಬಾಕಿ ಇರುವಾಗ ವಿಲ್ಲೆ ಬೌಲಿಂಗ್ ನಲ್ಲಿ ಔಟಾಗಿ ಕೇವಲ 1ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.

ಅಂತಿಮವಾಗಿ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229ರನ್ ಗಳಿಸಿ ಇಂಗ್ಲೆಂಡ್ ಗೆ ಗೆಲ್ಲಲು 230ರನ್ ಗಳ ಸಾಧಾರಣ ಗುರಿ ನೀಡಿದೆ. ಇಂಗ್ಲೆಂಡ್ ಪರ ಡೇವಿಡ್ ವಿಲ್ಲೆ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಅದಿಲ್ ರಷೀದ್ ತಲಾ 2 ವಿಕೆಟ್ ಪಡೆದರು. ಮಾರ್ಕ್ ವುಡ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com