ನವದೆಹಲಿ: ಭಾರತದ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಎಂಎಸ್ ಧೋನಿ ಅವರ ನಂಬರ್ 7ನೇ ಜೆರ್ಸಿ ಇನ್ಮುಂದೆ ಯಾವುದೇ ಆಟಗಾರನಿಗೆ ಲಭ್ಯವಿರುವುದಿಲ್ಲ. ಏಕೆಂದರೆ, ಬಿಸಿಸಿಐ ಈ ಐಕಾನಿಕ್ ಜೆರ್ಸಿ ಸಂಖ್ಯೆಯನ್ನು ನಿವೃತ್ತಿ ಮಾಡಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
'ಭಾರತೀಯ ಕ್ರಿಕೆಟ್ ಮಂಡಳಿಯು, ಕ್ರೀಡೆಗೆ ಎಂಎಸ್ ಧೋನಿ ಅವರ ಕೊಡುಗೆಗೆ ಗೌರವ ಸಲ್ಲಿಸಲು, ಧೋನಿಯವರ ಜೆರ್ಸಿ ಸಂಖ್ಯೆಯನ್ನು 'ನಿವೃತ್ತಿ' ಮಾಡಲು ನಿರ್ಧರಿಸಿದೆ' ಎಂದು ಶುಕ್ರವಾರ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
'2020ರ ಆಗಸ್ಟ್ 15ರಂದು ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಆದಾಗಿ ಮೂರು ವರ್ಷಗಳು ಕಳೆದಿವೆ. ಆದಾಗ್ಯೂ, ಅವರು ಐಪಿಎಲ್ ಕ್ರಿಕೆಟ್‌ನಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.
ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಪ್ರಶಸ್ತಿ ತಂದುಕೊಟ್ಟ ತಂಡದ ನಾಯಕತ್ವವನ್ನು ಧೋನಿ ವಹಿಸಿದ್ದರು.
2017ರಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಧರಿಸಿದ್ದ 10ನೇ ನಂಬರ್ ಜೆರ್ಸಿಯನ್ನು ಕೂಡ ಬಿಸಿಸಿಐ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು.
ಧೋನಿ (7) ಮತ್ತು ತೆಂಡೂಲ್ಕರ್ (10) ಧರಿಸಿರುವ ಜೆರ್ಸಿ ಸಂಖ್ಯೆಗಳು ಇನ್ಮುಂದೆ ಚೊಚ್ಚಲ ಆಟಗಾರರು ಸೇರಿದಂತೆ ಯಾರಿಗೂ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ತನ್ನ ನಿರ್ಧಾರದ ಬಗ್ಗೆ ತಂಡಕ್ಕೆ ತಿಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement