2ನೇ ಟೆಸ್ಟ್: ಸಚಿನ್ ತೆಂಡೂಲ್ಕರ್ ದಾಖಲೆ ಧೂಳಿಪಟ, ವೇಗದ 25 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ

ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ರನ್ ಮೆಷಿನ್ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದು, ವೇಗದ 25 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ರನ್ ಮೆಷಿನ್ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದು, ವೇಗದ 25 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಭಾನುವಾರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕಿಂಗ್ ಕೊಹ್ಲಿ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.  ಭಾರತದ ಎರಡನೇ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ, ಕೊಹ್ಲಿ ನಾಥನ್ ಲಿಯಾನ್ ಅವರ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆದು ಬೌಂಡರಿ ಗಿಟ್ಟಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 25,012ರನ್ ಗಳಿಗೆ ಏರಿಸಿಕೊಂಡರು.

ಈ ಪೈಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 106 ಪಂದ್ಯಗಳಿಂದ 8,195ರನ್ ಗಳಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 271 ಪಂದ್ಯಗಳಿಂದ 12809 ರನ್ ಗಳಿಸಿದ್ದಾರೆ. ಅಂತೆಯೇ ಟಿ20 ಕ್ರಿಕೆಟ್ ನಲ್ಲಿ 115 ಪಂದ್ಯಗಳಿಂದ 4008 ರನ್ ಗಳಿಸಿದ್ದಾರೆ. ಒಟ್ಟಾರೆ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 25,000 ರನ್‌ಗಳ ಗಡಿಯನ್ನು ವೇಗವಾಗಿ ದಾಟಿದರು.

ವೇಗದ 25 ಸಾವಿರ ರನ್
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗದ 25 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದು, ದೆಹಲಿ ಟೆಸ್ಟ್‌ಗೆ ಮುಂಚಿತವಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ವೃತ್ತಿಜೀವನದ ರನ್‌ಗಳ ಮೈಲಿಗಲ್ಲನ್ನು ತಲುಪಲು ಅವರಿಗೆ 65 ರನ್‌ ಕಡಿಮೆಯಿತ್ತು. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ನಡೆಯುತ್ತಿರುವ ದೆಹಲಿಯಲ್ಲಿ, 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಗೆ ಇಳಿದ ಭಾರತದ ಮಾಜಿ ನಾಯಕ ಕೊಹ್ಲಿ ಈ ಸಾಧನೆಯನ್ನು ಮಾಡಿದರು.  ವಿರಾಟ್ ಕೊಹ್ಲಿ 492 ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್ ಪೂರೈಸಿದ್ದು, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರನ್ ಗಳಿಕೆಯಲ್ಲಿ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಸಚಿನ್ ದಾಖಲೆ ಧೂಳಿಪಟ
549 ಪಂದ್ಯಗಳಲ್ಲಿ 25 ಸಾವಿರ ರನ್ ಪೂರೈಸಿರುವ ಕೊಹ್ಲಿ ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ ಈ ಸಾಧನೆಗಾಗಿ 577 ಪಂದ್ಯಗಳನ್ನು ತೆಗೆದುಕೊಂಡಿದ್ದರು. ವಿರಾಟ್ ಮತ್ತು ಸಚಿನ್ ನಂತರದ ಸ್ಥಾನದಲ್ಲಿ ಆಸ್ಚ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್ (588), ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ (594), ಶ್ರೀಲಂಕಾದ ಕುಮಾರ ಸಂಗಕ್ಕಾರ (608) ಮತ್ತು ಮಹೇಲಾ ಜಯವರ್ಧನೆ (701) ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com