ವಿಶ್ವಕಪ್ 2023: ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ-ಪಾಕಿಸ್ತಾನ ಪಂದ್ಯ ಮರು ನಿಗದಿ; ವರದಿ

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿರುವ 2023ರ ವಿಶ್ವಕಪ್‌ನ ಅತ್ಯಂತ ಉನ್ನತ ಮಟ್ಟದ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ. ಈಗ ಈ ಪಂದ್ಯವು ಅಕ್ಟೋಬರ್ 15ರ ಬದಲಿಗೆ ಅಕ್ಟೋಬರ್ 14ರಂದು ನಡೆಯಲಿದೆ.
ಟೀಂ ಇಂಡಿಯಾ, ಪಾಕಿಸ್ತಾನ
ಟೀಂ ಇಂಡಿಯಾ, ಪಾಕಿಸ್ತಾನ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿರುವ 2023ರ ವಿಶ್ವಕಪ್‌ನ ಅತ್ಯಂತ ಉನ್ನತ ಮಟ್ಟದ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ. ಈಗ ಈ ಪಂದ್ಯವು ಅಕ್ಟೋಬರ್ 15ರ ಬದಲಿಗೆ ಅಕ್ಟೋಬರ್ 14ರಂದು ನಡೆಯಲಿದೆ. 

ಈ ಹಿಂದೆ, 2023ರ ವಿಶ್ವಕಪ್‌ನ ಆತಿಥೇಯ ಭಾರತವು ಐಸಿಸಿ ಸಹಯೋಗದೊಂದಿಗೆ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, ಈ ಪಂದ್ಯವನ್ನು ಅಕ್ಟೋಬರ್ 15ರಂದು ನಿಗದಿಪಡಿಸಲಾಯಿತು. ಆದರೆ ಈ ದಿನದಿಂದಲೇ ನವರಾತ್ರಿ ಆರಂಭವಾಗುತ್ತಿರುವ ಕಾರಣ ಮುಂಜಾಗೃತ ಕ್ರಮವಾಗಿ ಪಂದ್ಯವನ್ನು ಮರುನಿಗದಿಪಡಿಸಲಾಗಿದೆ.

ಹಬ್ಬದ ದಿನದಂದು ಪಂದ್ಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗಬಹುದು ಎಂದು ಗುಜರಾತ್ ಪೊಲೀಸರು ಬಿಸಿಸಿಐಗೆ ತಿಳಿಸಿದ್ದರು. ಹೀಗಾಗಿ ಬಿಸಿಸಿಐ ಈ ಪಂದ್ಯಕ್ಕೆ ಹೊಸ ದಿನಾಂಕವನ್ನು ನಿಗದಿಪಡಿಸಿದೆ. ಆದರೆ ಅದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, 1 ಲಕ್ಷ 32 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಹೊರತುಪಡಿಸಿ, ಬಿಸಿಸಿಐ ಇತರ ಕೆಲವು ಪಂದ್ಯಗಳ ದಿನಾಂಕಗಳನ್ನು ಬದಲಾಯಿಸಬಹುದು. ಏಕೆಂದರೆ ಐಸಿಸಿಯ ಮೂರು ಸದಸ್ಯ ರಾಷ್ಟ್ರಗಳು ಈ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಕೋರಿವೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಲವು ಬೋರ್ಡ್‌ಗಳು ತಮ್ಮ ಕೆಲವು ಪಂದ್ಯಗಳಲ್ಲಿ 6 ದಿನಗಳ ಅಂತರವಿದೆ ಎಂದು ಹೇಳಿದ್ದಾರೆ. ಅದು ತುಂಬಾ ಹೆಚ್ಚಾಗಿದೆ ಎಂದು ಅವರು ಹೇಳಿದರು. ಹಾಗಿದ್ದಲ್ಲಿ, ನಾವು 4-5 ದಿನಗಳ ಅಂತರವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಇನ್ನು 3-4 ದಿನಗಳಲ್ಲಿ ಈ ಚಿತ್ರಣ ಸ್ಪಷ್ಟವಾಗಲಿದೆ. ಐಸಿಸಿಯೊಂದಿಗೆ ಸಮಾಲೋಚಿಸಿ ಎಲ್ಲಾ ಬದಲಾವಣೆಗಳನ್ನು ಮಾಡಲಾಗುವುದು. ಪಂದ್ಯದ ದಿನಾಂಕಗಳಲ್ಲಿ ಬದಲಾವಣೆ ಇರಲಿದ್ದು, ಪಂದ್ಯದ ಸಮಯ ಮತ್ತು ಸ್ಥಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಶ್ವಕಪ್‌ನ ವೇಳಾಪಟ್ಟಿಯಲ್ಲಿನ ಈ ಬದಲಾವಣೆಯು ಲಕ್ಷಾಂತರ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ. ಅವರು ವಿಶ್ವಕಪ್ ದಿನಾಂಕಗಳನ್ನು ಘೋಷಿಸಿದ ತಕ್ಷಣ ವಿಶ್ವದ ಎರಡು ದೊಡ್ಡ ಸಾಂಪ್ರದಾಯಿಕ ಎದುರಾಳಿ ತಂಡಗಳ ಪಂದ್ಯವನ್ನು ವೀಕ್ಷಿಸಲು ಹೋಟೆಲ್ ಗಳಲ್ಲಿ ತಮ್ಮ ಬುಕಿಂಗ್ ಮಾಡಿದ್ದಾರೆ.

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಅಭಿಮಾನಿಗಳು ಅಕ್ಟೋಬರ್ 15 ಅನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಈಗಾಗಲೇ ಮುನ್ನೆಲೆಗೆ ಬಂದಿದೆ. ಇದು ಹೋಟೆಲ್ ಬುಕಿಂಗ್‌ನಿಂದ ಫ್ಲೈಟ್ ಬುಕಿಂಗ್‌ವರೆಗೆ ಎಲ್ಲವನ್ನೂ ಒಳಗೊಂಡಿದೆ. ಆದರೆ ವಿಶ್ವಕಪ್‌ಗಾಗಿ ಟಿಕೆಟ್‌ಗಳ ಮಾರಾಟ ಇನ್ನೂ ಪ್ರಾರಂಭವಾಗಿಲ್ಲ. ಉಭಯ ದೇಶಗಳ ಕ್ರಿಕೆಟ್ ಪ್ರೇಮಿಗಳು ಈ ಅಮೋಘ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com