ICC ODI World Cup 2023: ಭಾರತ-ಪಾಕಿಸ್ತಾನ ಪಂದ್ಯದ ವೇಳಾಪಟ್ಟಿ ಬದಲಾವಣೆ ಸಾಧ್ಯತೆ; ಬಿಸಿಸಿಐ ಮಹತ್ವದ ಸಭೆ

ತೀವ್ರ ನಿರೀಕ್ಷೆ ಹುಟ್ಟಿಸಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ವೇಳಾಪಟ್ಟಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತ ಪಾಕಿಸ್ತಾನ ಪಂದ್ಯ ಮುಂದೂಡಿಕೆ ಸಾಧ್ಯತೆ
ಭಾರತ ಪಾಕಿಸ್ತಾನ ಪಂದ್ಯ ಮುಂದೂಡಿಕೆ ಸಾಧ್ಯತೆ

ನವದೆಹಲಿ: ತೀವ್ರ ನಿರೀಕ್ಷೆ ಹುಟ್ಟಿಸಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ವೇಳಾಪಟ್ಟಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯವನ್ನು ಬಹುತೇಕ ಮುಂದೂಡುವ ಸಾಧ್ಯತೆ ಇದೆ. ಭದ್ರತಾ ಏಜೆನ್ಸಿಗಳು, ವೇಳಾಪಟ್ಟಿಯನ್ನು ಮಾರ್ಪಡಿಸುವಂತೆ ಬಿಸಿಸಿಐಗೆ ಕೇಳಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನವರಾತ್ರಿಯ ಮೊದಲ ದಿನದಂದು ಪಂದ್ಯವನ್ನು ನಿಗದಿಪಡಿಸಿರುವ ಕಾರಣ ಈ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ. 

ಗುಜರಾತ್‌ನಾದ್ಯಂತ ಗಾರ್ಬಾ ಸಂಜೆಗಳಲ್ಲಿ ಸಾಕಷ್ಟು ಜನ ಭಾಗವಹಿಸುವುದರಿಂದ ಅಂದು ರಜಾದಿನ ಇರಲಿದೆ. ಈಗಾಗಲೇ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 15ರಂದು ಅಹಮದಾಬಾದ್‌ನ ಎಲ್ಲಾ ಐಷಾರಾಮಿ ಹೋಟೆಲ್‌ಗಳು ಬುಕ್ ಆಗಿವೆ. ಲಕ್ಷ ಲಕ್ಷ ಹಣ ಕೊಟ್ಟು ಹೋಟೆಲ್ ರೂಂ ಬುಕ್ ಆಗಿವೆ. ಹೊಟೆಲ್ ರೂಂಗಳಲ್ಲದೇ ಹೊಟೆಲ್ ಸಿಗದ ಕ್ರಿಕೆಟ್ ಪ್ರೇಮಿಗಳು ಖಾಸಗಿ ಆಸ್ಪತ್ರೆಗಳನ್ನೂ ಬುಕ್ ಮಾಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಟಿಕೆಟ್ ಇನ್ನೂ ಮಾರಾಟ ಆಗಿಲ್ಲವಾದರೂ ಈ ಮಟ್ಟದ ಕ್ರೇಜ್ ಈ ಪಂದ್ಯಕ್ಕಿದೆ. ಆದರೆ ಈಗ ದಿನಾಂಕ ಬದಲಾವಣೆ ಮಾಡಿದರೆ, ಅಭಿಮಾನಿಗಳಿಗೆ ನಿರಾಸೆಯಾಗಲಿದೆ.

ನವರಾತ್ರಿಯಿಂದ ಭದ್ರತೆಗೆ ಸಮಸ್ಯೆ
ಇನ್ನು ನವರಾತ್ರಿ ಹಿನ್ನಲೆಯಲ್ಲಿ ಅಹ್ಮದಾಬಾದ್ ನಲ್ಲಿ ಗರ್ಬಾ ಆಚರಣೆಗೆ ಲಕ್ಷಾಂತರ ಮಂದಿ ಸೇರಲಿದ್ದಾರೆ. ಹೀಗಾಗಿ ಪಂದ್ಯದ ಭದ್ರತೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಭದ್ರತಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. "ಈಗಾಗಲೇ ಬದಲೀ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಮಾಡಲಾಗುವುದು ಎಂದು" ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ. ನವರಾತ್ರಿ ಕಾರಣ ಭದ್ರತಾ ದೃಷ್ಟಿಯಿಂದ ಭಾರತ ಮತ್ತು ಪಾಕಿಸ್ತಾನದಂತಹ ಉನ್ನತ ಮಟ್ಟದ ಪಂದ್ಯವನ್ನು ನಡೆಸದಂತೆ ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ.

ಭಾರತ-ಪಾಕಿಸ್ತಾನ ಆಟಕ್ಕೆ ಹೊಸ ದಿನಾಂಕ ಘೋಷಣೆಯಾದರೆ, ಬುಕ್ ಆಗಿರುವ ಹೋಟೆಲ್‌ಗಳ ಕ್ಯಾನ್ಸಲ್ ಆಗಲಿದ್ದು, ಹೊಸ ದಿನಾಂಕದಲ್ಲಿ ಹೋಟೆಲ್ ಬುಕಿಂಗ್ ಮಾಡಲು ಮುಗಿ ಬೀಳುವ ಸಾಧ್ಯತೆ ಇದೆ.

ವಿಶ್ವಕಪ್ ಸಿದ್ಧತೆ ಪರಿಶೀಲಿಸಲು ಜುಲೈ 27 ರಂದು ಬಿಸಿಸಿಐ ಸಭೆ
ಇನ್ನು ಮಂಗಳವಾರ ಸಂಜೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಜುಲೈ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಸಭೆಗೆ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ. ಮಂಡಳಿಯು ಪಂದ್ಯದ ಪರಿಷ್ಕೃತ ದಿನಾಂಕ ಮತ್ತು ಅಹಮದಾಬಾದ್ ಪ್ರದೇಶದಲ್ಲಿನ ಭದ್ರತಾ ಸಮಸ್ಯೆಗಳನ್ನು ಸದಸ್ಯರಿಗೆ ತಿಳಿಸಬಹುದು ಎಂದು ಕೇಳಲಾಗಿದೆ.

ಬುಧವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿಶ್ವಕಪ್‌ಗಾಗಿ ವರ್ಕಿಂಗ್ ಗ್ರೂಪ್ ರಚನೆಯ ಕುರಿತು ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದಾರೆ. ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಬಿಸಿಸಿಐನ ಐವರು ಪದಾಧಿಕಾರಿಗಳು ತಿರುವನಂತಪುರ ಮತ್ತು ಗುವಾಹಟಿಯಲ್ಲಿನ ಅಭ್ಯಾಸಗಳು ಸೇರಿದಂತೆ ಎಲ್ಲಾ ಸ್ಥಳಗಳ ಸಿದ್ಧತೆಗಳನ್ನು ನೋಡಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಮಾಜಿ ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ, ಮಾಜಿ ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭತೇಜ್ ಭಾಟಿಯಾ ಮತ್ತು ಕೆಎಸ್‌ಸಿಎ ಕಾರ್ಯದರ್ಶಿ ಎ ಶಂಕರ್ ಒಳಗೊಂಡಿರುವ ಮೂಲಸೌಕರ್ಯ ಮತ್ತು ಸಬ್ಸಿಡಿ ಸಮಿತಿಯ ಪದಾಧಿಕಾರಿಗಳು ಸಹ ಈ ಸಭೆಯಲ್ಲಿ ಭಾಗವಾಗಲಿದ್ದಾರೆ. "ಈ ಉಪಸಮಿತಿಗಳು ನಮ್ಮ ಹಂಚಿಕೆಯ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಒಟ್ಟಾಗಿ, ನಾವು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಅನ್ನು ಅದ್ಭುತ ಯಶಸ್ಸನ್ನು ಮಾಡಬಹುದು ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದು" ಎಂದು ಶಾ ಪತ್ರದಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 4 ಪಂದ್ಯಗಳು
ವಿಶ್ವಕಪ್ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ದೆಹಲಿ, ಧರ್ಮಶಾಲಾ, ಅಹಮದಾಬಾದ್, ಹೈದರಾಬಾದ್, ಮುಂಬೈ, ಪುಣೆ, ಬೆಂಗಳೂರು, ಲಕ್ನೋ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ 10 ಸ್ಥಳಗಳಲ್ಲಿ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ ನಾಲ್ಕು ಪಂದ್ಯಗಳು ನಡೆಯಲಿದೆ. ಪಂದ್ಯಾವಳಿಯ ಆರಂಭಿಕ ಪಂದ್ಯ ಕೂಡ ಇಲ್ಲಿ ನಡೆಯಲಿದ್ದು, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ವಿರುದ್ಧ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪಂದ್ಯಗಳು ನಡೆಯಲಿದ್ದು ಫೈನಲ್ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. 1.30 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ದಾಖಲೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತದ ಹತ್ತು ನಗರಗಳಲ್ಲಿ ನಡೆಯಲಿದ್ದು, ಮುಂಬೈ ಮತ್ತು ಕೋಲ್ಕತ್ತಾ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com