ಕೆಎಲ್ ರಾಹುಲ್ ತಾಳ್ಮೆಯ ಆಟ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್ ಜಯ
ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಾಳ್ಮೆಯ ಆಟವಾಡಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
Published: 17th March 2023 09:17 PM | Last Updated: 17th March 2023 09:17 PM | A+A A-

ಸಂಗ್ರಹ ಚಿತ್ರ
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಾಳ್ಮೆಯ ಆಟವಾಡಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡ ಭಾರತ ತಂಡವು ಏಕದಿನ ಸರಣಿಯನ್ನೂ ಗೆಲ್ಲಲು ಹೊರಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 189 ರನ್‌ಗಳ ಗುರಿಯನ್ನು ನೀಡಿತ್ತು. ಭಾರತ ಈ ಗುರಿಯನ್ನು 39.5 ಓವರ್‌ಗಳಲ್ಲಿ 191 ರನ್ ಪೇರಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ತಂಡ 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟಾಯಿತು. ಮಿಚೆಲ್ ಮಾರ್ಷ್ ಕಾಂಗರೂಗಳ ಪರ ಗರಿಷ್ಠ 81 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಭಾರತ 39.5 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೆಎಲ್ ರಾಹುಲ್ ಲಯಕ್ಕೆ ಮರಳಿದ್ದು ಉತ್ತಮ ಬ್ಯಾಟಿಂಗ್ ಮಾಡಿ 91 ಎಸೆತಗಳಲ್ಲಿ 75 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಇನ್ನು ರವೀಂದ್ರ ಜಡೇಜಾ ಕೂಡ 45 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಬ್ಬರ ನಡುವೆ ಆರನೇ ವಿಕೆಟ್‌ಗೆ 108 ರನ್‌ಗಳ ಅಜೇಯ ಜೊತೆಯಾಟವಿತ್ತು.
ಇದನ್ನೂ ಓದಿ: ಭಾರತ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಹೋಗಬೇಕೇ?: ಹರ್ಭಜನ್ ಸಿಂಗ್ ಹೇಳಿದ್ದೇನು?
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇನ್ನು ಮುಂದಿನ ಏಕದಿನ ಪಂದ್ಯ ಭಾನುವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 16 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಸೋಲಿಸಿದೆ.
ಈ ಮೈದಾನದಲ್ಲಿ ಇಬ್ಬರ ನಡುವೆ ಐದು ಏಕದಿನ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ಮೂರರಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯ ಎರಡು ಪಂದ್ಯಗಳನ್ನು ಗೆದ್ದಿದೆ. 2007ರಲ್ಲಿ ಈ ಮೈದಾನದಲ್ಲಿ ಭಾರತ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದಾದ ಬಳಿಕ 2020ರಲ್ಲಿ ಆಸ್ಟ್ರೇಲಿಯಾ ಇದೇ ಮೈದಾನದಲ್ಲಿ ಭಾರತವನ್ನು ಸೋಲಿಸಿತ್ತು. ಇದೀಗ ಸುಮಾರು 16 ವರ್ಷಗಳ ನಂತರ ಭಾರತ ಮತ್ತೊಮ್ಮೆ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.