ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತದ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡ ಮುಗ್ಗರಿಸಿದ್ದು, ಮತ್ತೆ ಐಪಿಎಲ್ ಟ್ರೋಫಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಡಿಗೇರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಬಳಿಕ ಮಳೆ ಬಂದು ಆಟ ಸ್ಥಗಿತವಾಗಿತ್ತು. ಬಳಿಕ ಆಟ ಪ್ರಾರಂಭವಾದಾಗ ಅಂಪೈರ್ ಗಳು ಗುರಿಯನ್ನು ಪರಿಷ್ಕರಿಸಿದ್ದು 15 ಓವರ್ ನಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ನಿಗದಿ ಪಡಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸಿತು.
ಆ ಮೂಲಕ 5ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಚೆನ್ನೈ ಪರ ರುತುರಾಜ್ ಗಾಯರ್ವಾಡ್ 26ರನ್ ಗಳಿಸಿದರೆ, ಡೆವಾನ್ ಕಾನ್ವೆ 46ರನ್ ಗಳಿಸಿದರು. ಶಿವಂ ದುಬೆ 26 ರನ್ ಗಳಿಸಿದರೆ ಅಂಜಿಕ್ಯ ರಹಾನೆ 27 ರನ್ ಗಳಿಸಿದರು. ಕೊನೆಯ ಪಂದ್ಯವನ್ನಾಡಿದ ಅಂಬಾಟಿ ರಾಯುಡು 19ರನ್ ಗಳಿಸಿ ನಿರಾಶೆ ಮೂಡಿಸಿದರೆ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಧೋನಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು.
ಅಂತಿಮವಾಗಿ ರವೀಂದ್ರ ಜಡೇಜಾ ಮತ್ತು ದುಬೆ ಗೆಲುವಿನ ಔಪಚಾರಿಕತೆ ಮುಗಿಸಿದರು. ಅಂತಿಮ ಓವರ್ ನಲ್ಲಿ ಗೆಲ್ಲಲು 13ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಬೌಲಿಂಗ್ ಗೆ ಇಳಿದ ಮೋಹಿತ್ ಶರ್ಮಾ ಬಿಗುವಿನ ಬೌಲಿಂಗ್ ದಾಳಿ ನಡೆಸಿದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ನೀಡಿ ಒತ್ತಡ ಹೇರಿದರು. ಆದರೆ 5ನೇ ಎಸೆತದಲ್ಲಿ ಜಡೇಜಾ ಸಿಕ್ಸರ್ ಸಿಡಿಸಿದರು. ಆಗ ಅಂತಿಮ ಎಸೆತದಲ್ಲಿ ಗೆಲ್ಲಲು 4 ರನ್ ಗಳ ಅವಶ್ಯಕತೆ ಇದ್ದಾಗ ಜಡ್ಡು ಮೋಹಿತ್ ಎಸೆದ ಫುಲ್ ಟಾಸ್ ಎಸೆತವನ್ನು ಶಾರ್ಟ್ ಫೈನ್ ನತ್ತ ತಳ್ಳಿ ಬೌಂಡರಿ ಪಡೆದರು.
ಆ ಮೂಲಕ ಚೆನ್ನೈ ತಂಡ ಫೈನಲ್ ನಲ್ಲಿ 5 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು. ಗುಜರಾತ್ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 3 ವಿಕೆಟ್ ಪಡೆದರು.
Advertisement