Worldcup 2023: ಭಾರತದ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ, 83 ರನ್ ಗಳಿಗೆ ಹರಿಣಿಗಳು ಆಲೌಟ್

ವಿಶ್ವಕಪ್ 2023ರ 37ನೇ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಬೃಹತ್ ಮೊತ್ತದ ಗೆಲುವು ಸಾಧಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಕೋಲ್ಕತ್ತಾ: ವಿಶ್ವಕಪ್ 2023ರ 37ನೇ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಬೃಹತ್ ಮೊತ್ತದ ಗೆಲುವು ಸಾಧಿಸಿದೆ. 

ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ 27.1 ಓವರ್‌ಗಳಲ್ಲಿ 83 ರನ್ ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿ 49ನೇ ಶತಕ ದಾಖಲಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ 49 ಶತಕಗಳನ್ನು ಸರಿಗಟ್ಟಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ದಕ್ಷಿಣ ಆಫ್ರಿಕಾ ನಾಯಕ 11, ದುಸೇನ್ 13, ಡೇವಿಡ್ ಮಿಲ್ಲರ್ 11 ಮತ್ತು ಜಾನ್ಸೆನ್ 14 ರನ್ ಬಾರಿಸಿದ್ದಾರೆ. ಭಾರತದ ಪರ ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ 5, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭವನ್ನು ನೀಡಿದರು. ತಂಡವು 4.3 ಓವರ್‌ಗಳಲ್ಲಿ 50 ರನ್ ಪೂರೈಸಿತು. ರೋಹಿತ್ ಶರ್ಮಾ 24 ಎಸೆತಗಳಲ್ಲಿ 6 ಸ್ಫೋಟಕ ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿದರು. ಕಗಿಸೊ ರಬಾಡ ರೋಹಿತ್‌ ಶರ್ಮಾರನ್ನು ಔಟ್ ಮಾಡುವ ಮೂಲಕ ಆಫ್ರಿಕಾಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಶುಭಮನ್ ಗಿಲ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲಾಗದೆ 23 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇದಾದ ನಂತರ ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ ಇನ್ನಿಂಗ್ಸ್ ಕೈಗೆತ್ತಿಕೊಂಡು ಸ್ಕೋರ್ ಹೆಚ್ಚಿಸಿದ್ದರು.

227 ರನ್‌ಗಳಿದ್ದಾಗ 37ನೇ ಓವರ್‌ನ ಐದನೇ ಎಸೆತದಲ್ಲಿ ಭಾರತಕ್ಕೆ ಮೂರನೇ ಹೊಡೆತ ಶ್ರೇಯಸ್ ಅಯ್ಯರ್ ರೂಪದಲ್ಲಿ ಬಂದಿತು. ಅಯ್ಯರ್ 87 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸ್ಫೋಟಕ ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿ ಲುಂಗಿ ಎನ್‌ಗಿಡಿ ಎಸೆತದಲ್ಲಿ ಮಾರ್ಕ್‌ರಾಮ್‌ಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಕೆಎಲ್ ರಾಹುಲ್ 8 ರನ್ ಗಳಿಸಿ ಔಟಾದರು. 14 ಎಸೆತಗಳಲ್ಲಿ 22 ರನ್ ಗಳಿಸಿ ಸೂರ್ಯಕುಮಾರ್ ಯಾದವ್ ಔಟಾದರು. ನಂತರ ಬಂದ ರವೀಂದ್ರ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 19 ರನ್ ಗಳಿಸಿ ಅಜೇಯರಾಗಿ ಉಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com