ಐಸಿಸಿ ಏಕದಿನ ವಿಶ್ವಕಪ್: ಹಾಲಿ ಚಾಂಪಿಯನ್ನರಿಗೆ ಮತ್ತೆ ಮುಖಭಂಗ, ಶ್ರೀಲಂಕಾಗೆ 8 ವಿಕೆಟ್ ಗಳ ಭರ್ಜರಿ ಜಯ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ನೆರೆಯ ಶ್ರೀಲಂಕಾ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಶ್ರೀಲಂಕಾಗೆ 8 ವಿಕೆಟ್ ಗಳ ಭರ್ಜರಿ ಜಯ
ಶ್ರೀಲಂಕಾಗೆ 8 ವಿಕೆಟ್ ಗಳ ಭರ್ಜರಿ ಜಯ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ನೆರೆಯ ಶ್ರೀಲಂಕಾ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೀಡಿದ 157 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಕೇವಲ 25.4 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 160ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಆ ಮೂಲಕ ಹಾಲಿ ಚಾಂಪಿಯನ್ನರ ವಿರುದ್ಧ ಭರ್ಜರಿ 8 ವಿಕೆಟ್ ಗಳ ಅಂತರದ ಗೆಲುವು ಸಾಧಿಸಿತು. ಶ್ರೀಲಂಕಾ ಪರ ಪಾತುಂ ನಿಸ್ಸಾಂಕ ಅಜೇಯ 77ರನ್ ಗಳಿಸಿದರೆ, ಸದೀರ ಸಮರವಿಕ್ರಮ ಅಜೇಯ 65 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು.

ಆರಂಭಿಕ ಆಘಾತದ ಹೊರತಾಗಿಯೂ ಪಾತುಂ ನಿಸ್ಸಾಂಕ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಇಂಗ್ಲೆಂಡ್ ತಂಡದ ವಿರುದ್ಧ ಮೇಲುಗೈ ಸಾಧಿಸಿತು. ಇಂಗ್ಲೆಂಡ್ ನ ಬಲಿಷ್ಠ ಬೌಲಿಂಗ್ ಪಡೆ ಶ್ರೀಲಂಕಾಗೆ ಯಾವುದೇ ಹಂತದಲ್ಲೂ ಪರಿಣಾಮಕಾರಿಯಾಗಿ ಪರಿಣಮಿಸಲೇ ಇಲ್ಲ. ನಾಯಕ ಕುಶಾಲ್ ಮೆಂಡಿಸ್  11 ರನ್ ಗಳಿಗೆ ಔಟಾದ ಬಳಿಕ ಪಾತುಂ ನಿಸ್ಸಾಂಕ ಮತ್ತು ಸದೀರ ಸಮರವಿಕ್ರಮ ಜೋಡಿ 137 ರನ್ ಗಳ ಶತಕದ ಜೊತೆಯಾಟವಾಡಿ ತಂಡಕ್ಕೆ 8 ವಿಕೆಟ್ ಗಳ ಅಮೋಘ ಜಯ ತಂದು ಕೊಟ್ಟರು.

ಅಲ್ಪ ಮೊತ್ತಕ್ಕೆ ಕುಸಿತ ಚಾಂಪಿಯನ್ ಇಂಗ್ಲೆಂಡ್
ಇದಕ್ಕೂ ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಶ್ರೀಲಂಕಾದ ಸಾಂಘಿಕ ಬೌಲಿಂಗ್ ಪ್ರದರ್ಶನಕ್ಕೆ ಅಲ್ಪ ಮೊತ್ತಕ್ಕೆ ಕುಸಿಯಿತು. ಬೆನ್ ಸ್ಟೋಕ್ಸ್ (43 ರನ್) ಮತ್ತು ಬೇರ್ ಸ್ಟೋ (30 ರನ್) ಹೊರತು ಪಡಿಸಿದರೆ ಇಂಗ್ಲೆಂಡ್ ತಂಡ ಬೇರಾವ ಆಟಗಾರನೂ ಕೂಡ ಪ್ರಭಾವಿ ಬ್ಯಾಟಿಂಗ್ ಪ್ರದರ್ಶನ ಮಾಡಲೇ ಇಲ್ಲ. ಪರಿಣಾಮ ಇಂಗ್ಲೆಂಡ್ ತಂಡ ಕೇವಲ 33.2 ಓವರ್ ಗೆ 156ರನ್ ಗಳಿಸಿ ಸರ್ವುಪತನ ಕಂಡಿತು. ಶ್ರೀಲಂಕಾ ಪರ ಲಾಹಿರು ಕುಮಾರ 3 ವಿಕೆಟ್ ಕಬಳಿಸಿ ಪ್ರಭಾವಿ ಬೌಲರ್ ಎನಿಸಿಕೊಂಡರೆ, ರಜಿತಾ ಮತ್ತು ಮ್ಯಾಥ್ಯೂಸ್ ತಲಾ 2 ವಿಕೆಟ್ ಕಬಳಿಸಿದರು. ಮಹಿಶ ತೀಕ್ಷಣ 1 ವಿಕೆಟ್ ಪಡೆದರು.

ಶ್ರೀಲಂಕಾ ಪರ 3 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಅಲ್ಪ ಮೊತ್ತಕ್ಕೆ ಕಾರಣರಾದ ಲಾಹಿರು ಕುಮಾರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com