'ನಾನು ಕೋಪಗೊಂಡಿದ್ದೆ'; ವಿಲ್ ಜಾಕ್ಸ್ ಜೊತೆ ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ ಹೇಳಿದ್ದೇನು?

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಜಿಟಿ ವಿರುದ್ಧದ ಜಯದ ನಂತರ ಆರ್‌ಸಿಬಿ ಬ್ಯಾಟರ್‌ಗಳ ನಡುವಿನ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ
ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ವಿಲ್ ಜಾಕ್ಸ್ ಅವರ ಆಕರ್ಷಕ ಶತಕವು ಗುಜರಾತ್ ಟೈಟಾನ್ಸ್ ನೀಡಿದ 201 ರನ್ ಗುರಿ ಬೆನ್ನತ್ತಲು, ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಲು ನೆರವಾಯಿತು.

ಜಾಕ್ಸ್ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ಅಲ್ಲಿಂದ ಕೇವಲ 10 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಸಿಡಿಸಿದರು. 41 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಮೂಲಕ ಅಜೇಯ 100 ರನ್ ಗಳಿಸಿದರು. 44 ಎಸೆತಗಳಲ್ಲಿ ಔಟಾಗದೆ 70 ರನ್ ಗಳಿಸಿದ ವಿರಾಟ್ ಕೊಹ್ಲಿಯೊಂದಿಗೆ ಜಾಕ್ಸ್ RCB ಸುಲಭವಾಗಿ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿದರು.

ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಜಯದ ನಂತರ ಆರ್‌ಸಿಬಿ ಬ್ಯಾಟರ್‌ಗಳ ನಡುವಿನ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೊಹ್ಲಿ ಜ್ಯಾಕ್ಸ್‌ಗೆ ಹೀಗೆ ಹೇಳುವುದನ್ನು ಕೇಳಬಹುದು. 'ಮೊದಲ ಬಾಲ್ ಅನ್ನು ಸಿಕ್ಸ್ ಹೊಡೆಯಲಿಲ್ಲ ಎಂದು ನಾನು ಕೋಪಗೊಂಡಿದ್ದೆ. ಆದರೆ, 94 ರನ್ ಗಳಿಸಿದ್ದ ನಿಮ್ಮನ್ನು ನೋಡಿದಾಗ, ನಾನು ಮೊದಲ ಬಾಲನ್ನು ಹೊಡೆಯದಿರುವುದೇ ಒಳ್ಳೆಯದಾಯಿತು ಎಂದುಕೊಂಡೆ' ಎಂದಿದ್ದಾರೆ.

ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ
IPL 2024: ಜಿಟಿ ವಿರುದ್ಧ ಭರ್ಜರಿ ಗೆಲುವು; ಆರ್‌ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ!

ಐಪಿಎಲ್ 2024ನೇ ಆವೃತ್ತಿಯಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತೋರದ ಆರ್‌ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಆದರೆ, ಕಳೆದೆರಡು ಪಂದ್ಯಗಳಿಂದ ಉತ್ತಮ ಪ್ರದರ್ಶನ ತೋರುತ್ತಿರುವ ಆರ್‌ಸಿಬಿ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ಡ್ರೆಸ್ಸಿಂಗ್ ರೂಂ ಕಳಕಳಿಯಿಂದ ತುಂಬಿದೆ. ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಟೀಕಾಕಾರರಿಗೆ ಕೊಹ್ಲಿ ಖಡಕ್ ಉತ್ತರ

ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆಡಿರುವ 10 ಪಂದ್ಯಗಳಲ್ಲಿ 71.43 ಸರಾಸರಿಯಲ್ಲಿ 500 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬ್ಯಾಟಿನಿಂದ ನಾಲ್ಕು ಅರ್ಧಶತಕ, ಒಂದು ಶತಕ ಕೂಡ ಬಂದಿದೆ.

ಕೊಹ್ಲಿ ಸತತವಾಗಿ ರನ್ ಗಳಿಸುತ್ತಿದ್ದರೂ ಟೀಕೆಗಳು ಮಾತ್ರ ನಿಂತಿಲ್ಲ. ಸದ್ಯ 147.49 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೂ, ಟಿ20 ಕ್ರಿಕೆಟ್‌ನಲ್ಲಿ ಇದು ಕೆಟ್ಟ ಸ್ಟ್ರೈಕ್‌ರೇಟ್ ಎನ್ನುವ ಮಾತುಗಳು ಕೇಳಿಬಂದಿವೆ. ಕೆಲವು ಮಾಜಿ ಕ್ರಿಕೆಟಿಗರೂ ಕೂಡ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಟೀಕಿಸಿದ್ದರು. ತಮ್ಮ ವಿರುದ್ಧದ ಟೀಕೆಗಳಿಗೆ ವಿರಾಟ್ ಕೊಹ್ಲಿ ಇದೀಗ ಉತ್ತರ ಕೊಟ್ಟಿದ್ದಾರೆ.

ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ
IPL 2024: 9 ವಿಕೆಟ್ ಗಳಿಂದ ಗುಜರಾತ್ ಸೋಲಿಸಿದ ಆರ್ ಸಿಬಿ!

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ನನ್ನ ಸ್ಟ್ರೈಕ್-ರೇಟ್‌ ಬಗ್ಗೆ ಮಾತನಾಡುವ ಮತ್ತು ಸ್ಪಿನ್ ಬೌಲಿಂಗ್‌ಗೆ ಚೆನ್ನಾಗಿ ಆಡುವುದಿಲ್ಲ ಎನ್ನುವ ಎಲ್ಲರಿಗೂ ಇಂದು ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. 15 ವರ್ಷಗಳಿಂದ ತಂಡದ ಗೆಲುವಿಗಾಗಿ ನಾನು ಆಡುತ್ತಿದ್ದೇನೆ. ಅಂತಿಮವಾಗಿ ನಿಮ್ಮ ತಂಡ ಗೆದ್ದಿದೆ ಎನ್ನುವುದು ಸಾಕು. ಬಾಕ್ಸ್‌ನಲ್ಲಿ ಕೂತು ಮಾತನಾಡುವವರು ಏನು ಬೇಕಾದರು ಮಾತನಾಡಲಿ. ಜನರು ಅವರವರ ಊಹೆಗಳ ಆಧಾರದಲ್ಲಿ ದಿನನಿತ್ಯ ಮಾತನಾಡುತ್ತಿರುತ್ತಾರೆ. ಆದರೆ, ತಂಡಕ್ಕಾಗಿ ಆಡುವವರಿಗೆ ಮಾತ್ರ ಏನಾಗುತ್ತಿದೆ ಎಂಬುದು ತಿಳಿದಿರುತ್ತದೆ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com