ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯ: ICC ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ

ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ.
ಜಯ್ ಶಾ
ಜಯ್ ಶಾ
Updated on

ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರೆಗ್ ಬಾರ್ಕ್ಲೇ ಸ್ಥಾನವನ್ನು ವಹಿಸಲಿದ್ದಾರೆ.

ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಸತತ ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದ ಅವರು ಇತ್ತೀಚೆಗೆ ಮೂರನೇ ಅವಧಿಗೆ ಸ್ಪರ್ಧೆಯಿಂದ ದೂರ ಸರಿದಿದ್ದರು. ICC ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಅರ್ಹರಾಗಿರುತ್ತಾರೆ. ಆದರೆ ನ್ಯೂಜಿಲೆಂಡ್ ವಕೀಲ ಗ್ರೆಗ್ ಬಾರ್ಕ್ಲೇ ಇದುವರೆಗೆ 4 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಬಾರ್ಕ್ಲೇ ಅವರನ್ನು 2020ರ ನವೆಂಬರ್ ನಲ್ಲಿ ICC ಯ ಸ್ವತಂತ್ರ ಅಧ್ಯಕ್ಷರಾಗಿ ನೇಮಿಸಲಾಯಿತು. ನಂತರ 2022ರಲ್ಲಿ ಈ ಹುದ್ದೆಗೆ ಮರು ಆಯ್ಕೆಯಾಗಿದ್ದರು.

ICC ನಿಯಮಗಳ ಪ್ರಕಾರ, ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ (51%) ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ, ಅಧ್ಯಕ್ಷರಾಗಲು, ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿರಬೇಕಾಗಿತ್ತು. ಪ್ರಸಕ್ತ ನಿರ್ದೇಶಕರು 2024ರ ಆಗಸ್ಟ್ 27ರೊಳಗೆ ಮುಂದಿನ ಅಧ್ಯಕ್ಷಗಾದಿಗೆ ನಾಮನಿರ್ದೇಶನ ಸಲ್ಲಿಸಬೇಕಿತ್ತು ಆದರೆ ಅವರು ಸಲ್ಲಿಸಿಲ್ಲ. ಇನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆ ನಡೆಯಲಿತ್ತು. ಆದರೆ ಜಯ್ ಶಾ ಒಬ್ಬರೇ ನಾಮನಿರ್ದೇಶನವಾಗಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರ ಅಧಿಕಾರಾವಧಿಯು 2024ರ ಡಿಸೆಂಬರ್ 1ರಿಂದ ಪ್ರಾರಂಭವಾಗುತ್ತದೆ.

ಜಯ್ ಶಾ
ಜಯ್ ಶಾ ICC ಅಧ್ಯಕ್ಷರಾದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರು?

ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಪ್ರಬಲ ಆಕಾಂಕ್ಷಿಯಾಗಿದ್ದೇಕೆ?

ಜಯ್ ಶಾ ಅವರನ್ನು ಐಸಿಸಿ ಮಂಡಳಿಯಲ್ಲಿ ಅತ್ಯಂತ ಪ್ರಭಾವಶಾಲಿ ಮುಖವೆಂದು ಪರಿಗಣಿಸಲಾಗಿದೆ. ಅವರು ಪ್ರಸ್ತುತ ICCಯ ಪ್ರಬಲ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಉಪಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅವರು 16 ಮತದಾರರಲ್ಲಿ ಹೆಚ್ಚಿನ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಪ್ರಸ್ತುತ, ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಒಂದು ವರ್ಷ ಉಳಿದಿತ್ತು.

ಕಿರಿಯ ಅಧ್ಯಕ್ಷ ಎಂಬ ಖ್ಯಾತಿ

ಜಯ್ ಶಾ 35ನೇ ವಯಸ್ಸಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಐಸಿಸಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿಯನ್ನು ಮುನ್ನಡೆಸಿದ ಭಾರತೀಯರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com