
ಮುಂಬೈ: ಕುಡಿತದ ಚಟಕ್ಕೆ ದಾಸರಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಚಿಕಿತ್ಸೆಗೆ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ನೆರವಿನ ಹಸ್ತ ಚಾಚಿದ್ದು, ಈ ಕುರಿತು ಕಾಂಬ್ಳಿ ಕೂಡ ಮನ ಬಿಚ್ಚಿ ಮಾತನಾಡಿದ್ದಾರೆ.
ಕುಡಿತದ ಚಟಕ್ಕೆ ದಾಸರಾಗಿ ಅನಾರೋಗ್ಯಕ್ಕೆ ತುತ್ತಾಗಿ ಹೀನಾಯ ಪರಿಸ್ಥಿತಿಯಲ್ಲಿರುವ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ತಮ್ಮ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕಳವಳಗಳ ನಡುವೆಯೂ ಪುನರ್ವಸತಿ ಕೇಂದ್ರ (Rahab Centre)ಕ್ಕೆ ಹೋಗಲು ಒಪ್ಪಿಕೊಂಡಿದ್ದು, ಇದಕ್ಕೆ ನೆರವಾದ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.
ಈ ಹಿಂದೆ ಮುಂಬೈನಲ್ಲಿ ನಡೆದ ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಆಪ್ತ ವಿನೋದ್ ಕಾಂಬ್ಳಿ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ಗಿಂತ ಹೆಚ್ಚಾಗಿ ಅವರ ಸ್ನೇಹಿತ ವಿನೋದ್ ಕಾಂಬ್ಳಿ ಹೆಚ್ಚು ಸುದ್ದಿಯಾಗಿದ್ದರು. ಕಾರಣ ಅವರ ಅನಾರೋಗ್ಯ ಮತ್ತು ಕುಡಿತದ ಚಟ.. ಸಚಿನ್ ಮತ್ತು ಕಾಂಬ್ಳಿ ನಡುವೆ ಕೇವಲ 1 ವರ್ಷ ವಯಸ್ಸಿನ ಅಂತರವಿದ್ದು, ವೇದಿಕೆಯಲ್ಲಿದ್ದ ವಿನೋದ್ ಸಾಕಷ್ಟು ಕೃಶವಾಗಿದ್ದರು. ಕಾಂಬ್ಳಿ ಆರೋಗ್ಯ ಚೇತರಿಕೆಗಾಗಿ ಸಾಕಷ್ಟು ಮಾಜಿ ಕ್ರಿಕೆಟಿಗರು ಹಣಕಾಸಿನ ನೆರವು ಘೋಷಿಸಿದ್ದರು.
ಪ್ರಮುಖವಾಗಿ ಭಾರತ ಕ್ರಿಕೆಟ್ ಲೆಜೆಂಡ್ ಆಟಗಾರ ಕಪಿಲ್ ದೇವ್, ಕಾಂಬ್ಳಿ ಅವರ ಸಂಪೂರ್ಣ ಆರೋಗ್ಯ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದರು. ಆದರೆ ಅದಕ್ಕೆ ಷರತ್ತು ಕೂಡ ವಿಧಿಸಿದ್ದರು. ಇದೀಗ ಈ ವಿಚಾರವಾಗಿ ಕಾಂಬ್ಳಿ ಪ್ರತಿಕ್ರಿಯೆ ನೀಡಿದ್ದಾರೆ.
ಷರತ್ತು ಒಪ್ಪಿಕೊಂಡ ಕಾಂಬ್ಳಿ, 15ನೇ ಬಾರಿಗೆ ರಿಹ್ಯಾಬ್ ಗೆ!
ವಿನೋದ್ ಕಾಂಬ್ಳಿ ಅವರ ನೆರವಿಗೆ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸಿದ್ಧವಿರುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಆದರೆ ಕಾಂಬ್ಳಿಗೆ ನೆರವು ನೀಡುವುದಕ್ಕೆ ಒಂದು ಷರತ್ತು ವಿಧಿಸಿದ್ದರು. ಕಾಂಬ್ಳಿ ತಮ್ಮ ಕುಡಿತದ ಚಟವನ್ನು ಬಿಡಲು ರಿಹ್ಯಾಬ್ ಸೆಂಟರ್ಗೆ ಹೋಗುವುದಾದರೆ ಮಾತ್ರ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದಿದ್ದರು. ಇದೀಗ ಕಪಿಲ್ ದೇವ್ ವಿಧಿಸಿದ್ದ ಷರತ್ತಿಗೆ ಒಪ್ಪಿಗೆ ನೀಡಿರುವ ಕಾಂಬ್ಳಿ, ತಾವು ರಿಹ್ಯಾಬ್ ಕೇಂದ್ರಕ್ಕೆ ತೆರಳಲು ಸಿದ್ಧ.. ಅಲ್ಲದೆ ಇದರಲ್ಲಿ ತಮಗೆ ಯಾವುದೇ ಮುಜುಗರವಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ 15ನೇ ಬಾರಿಗೆ ಪುನರ್ವಸತಿ ಕೇಂದ್ರ (Rahab Centre)ಕ್ಕೆ ಹೋಗಲು ಸಿದ್ಧರಾಗಿದ್ದಾರೆ.
ಕುಟುಂಬಕ್ಕೆ ಹ್ಯಾಟ್ಸ್ ಆಫ್
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ವಿನೋದ್ ಕಾಂಬ್ಳಿ ಅದರಲ್ಲಿ ಪುನರ್ವಸತಿಗೆ ಹೋಗಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ‘ನಾನು ಪುನರ್ವಸತಿಗೆ ಹೋಗಲು ಸಿದ್ಧನಿದ್ದೇನೆ. ನಾನು ಯಾವುದಕ್ಕೂ ಹೆದರದ ಕಾರಣ ನಾನು ಹೋಗಲು ಬಯಸುತ್ತೇನೆ. ನನ್ನ ಕುಟುಂಬ ನನ್ನೊಂದಿಗಿದೆ. ತಾನು ಗಂಭೀರ ಮೂತ್ರ ಸೋಂಕಿನಿಂದ ಬಳಲುತ್ತಿದ್ದೇನೆ. ನನ್ನ ಪತ್ನಿ, ಮಗ ಮತ್ತು ಮಗಳು ಒಟ್ಟಾಗಿ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ.
ರೋಗದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಪ್ರಮುಖವಾಗಿ ನನ್ನ ಹೆಂಡತಿ ಎಲ್ಲವನ್ನೂ ನಿಭಾಯಿಸಿದ ರೀತಿಗೆ ಹ್ಯಾಟ್ಸ್ ಆಫ್ ಹೇಳಬೇಕು. ನನ್ನ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ. ಬಿಸಿಸಿಐನಿಂದ ಪಡೆಯುವ ಪಿಂಚಣಿಯೇ ನನ್ನ ಆದಾಯದ ಮೂಲವಾಗಿದ್ದು, ಪ್ರತಿ ತಿಂಗಳು ಬರುವ 30 ಸಾವಿರ ರೂ. ಪಿಂಚಣೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಕಾಂಬ್ಳಿ ಹೇಳಿದ್ದಾರೆ.
ಭಯವಿಲ್ಲ
ಇದೇ ವೇಳೆ ನನ್ನ ಕುಟುಂಬ ನನ್ನೊಂದಿಗೆ ಇರುವವರೆಗೆ, ನಾನು ಯಾವುದಕ್ಕೂ, ಯಾರಿಗೂ ಹೆದರುವುದಿಲ್ಲ. ನಾನು ರಿಹ್ಯಾಬ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇನೆ ಮತ್ತು ಸಂತೋಷವಾಗಿ ಮನೆಗೆ ಹಿಂತಿರುಗುತ್ತೇನೆ. ನನ್ನ ಪರಿಸ್ಥಿತಿ ನೋಡಿ ಗವಾಸ್ಕರ್, ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ಅಜಯ್ ಜಡೇಜಾ ಮತ್ತು ಅಬೆ ಕುರುವಿಲ್ಲಾ ಕೂಡ ತಮ್ಮನ್ನು ಸಂಪರ್ಕಿಸಿ ನೆರವು ನೀಡುವ ಕುರಿತು ಮಾತನಾಡಿದ್ದಾರೆ. ಜಡೇಜಾ ನನ್ನ ಒಳ್ಳೆಯ ಸ್ನೇಹಿತ. ಅವರು ನನ್ನನ್ನು ಭೇಟಿ ಮಾಡಲು ಬಂದು 'ಬಾ, ಎದ್ದೇಳು' ಎಂದು ಹೇಳಿದರು. ಇತ್ತೀಚೆಗೆ ಬಹಳಷ್ಟು ಜನರು ನನಗೆ ಕರೆ ಮಾಡಿದ್ದಾರೆ. ಅವರೆಲ್ಲರ ಆಶೀರ್ವಾದ ನನ್ನ ಮೇಲಿದೆ ಖಂಡಿತ ನಾನು ಯಶಸ್ವಿಯಾಗಿ ಹೊರಬರುತ್ತೇನೆ ಎಂದು ಕಾಂಬ್ಳಿ ಹೇಳಿದ್ದಾರೆ.
Advertisement