
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಕ್ಯಾಚ್ ಬಗ್ಗೆ ಮೊದಲ ಬಾರಿಗೆ ಸೂರ್ಯ ಕುಮಾರ್ ಯಾದವ್ ಮಾತನಾಡಿದ್ದಾರೆ.
ಹೌದು.. ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂಬ ಸಮಯದಲ್ಲಿ ಡೇವಿಡ್ ಮಿಲ್ಲರ್ ಭಾರಿಸಿದ ಚೆಂಡನ್ನು ಭಾರತದ ಸೂರ್ಯ ಕುಮಾರ್ ಯಾದವ್ ಬೌಂಡರಿ ಲೈನ್ ನಲ್ಲಿ ಹಾರಿ ಅದ್ಭುತವಾಗಿ ಹಿಡಿತಕ್ಕೆ ಪಡೆದು ಗೆಲುವು ತಂದುಕೊಟ್ಟಿದ್ದರು.
ಈ ಅದ್ಭುತ ಕ್ಯಾಚ್ ನಿಂದಲೇ ಭಾರತಕ್ಕೆ ಗೆಲುವು ದಕ್ಕಿತು ಎಂಬ ವಾದವೂ ಕೇಳಿಬರುತ್ತಿದೆ. ಸೂರ್ಯ ಕುಮಾರ್ ಕ್ಯಾಚ್ ಪಡೆಯುವ ವೇಳೆ ಬೌಂಡರಿ ಲೈನ್ ಟಚ್ ಮಾಡಿದ್ದರು. ಹೀಗಾಗಿ ಅದು ನಾಟೌಟ್ ಆಗಿತ್ತು. ಸಿಕ್ಸ್ ಘೋಷಿಸಬೇಕಿತ್ತು ಎಂಬ ವಾದವಿದೆ. ಈ ವಿವಾದದ ನಡುವೆಯೇ ಸೂರ್ಯ ಕುಮಾರ್ ಯಾದವ್ ತಮ್ಮ ಕ್ಯಾಚ್ ಬಗ್ಗೆ ಮಾತನಾಡಿದ್ದಾರೆ.
"ನಮ್ಮ ಫೀಲ್ಡಿಂಗ್ ಕೋಚ್ ದಿಲೀಪ್ ಅವರು, ವಿರಾಟ್ ಕೊಹ್ಲಿ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಯಾವಾಗಲೂ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಫೀಲ್ಡಿಂಗ್ ಮಾಡಬೇಕು, ಅಲ್ಲಿ ಚೆಂಡು ಹೋಗುವ ಹೆಚ್ಚಿನ ಅವಕಾಶವಿರುತ್ತದೆ. ಹೀಗಾಗಿ ಬೌಂಡರಿ ಲೈನ್ ನಲ್ಲಿ ಅತ್ಯಂತ ಜಾಗರೂಕವಾಗಿ ಫೀಲ್ಡಿಂಗ್ ಮಾಡಬೇಕು ಎಂದು ಹೇಳಿದ್ದರು. ನಾವು ಕೂಡ ಇಂತಹ ಕ್ಯಾಚಿಂಗ್ ತರಬೇತಿಯನ್ನು ವಿವಿಧ ಮೈದಾನಗಳಲ್ಲಿ ನಡೆಸಿದ್ದೆವು. ಫೈನಲ್ ಪಂದ್ಯದ ವೇಳೆ ನಾನು ಬೌಂಡರಿ ಲೈನ್ ಸಮೀಪದಲ್ಲೇ ನಿಂತಿದ್ದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ವೈಡ್ ಯಾರ್ಕರ್ ಬೌಲಿಂಗ್ ಗೆ ಫೀಲ್ಡ್ ಸೆಟ್ ಮಾಡಿದ್ದರು.
ಅದೇ ಹೊತ್ತಿನಲ್ಲಿ ಡೇವಿಡ್ ಮಿಲ್ಲರ್ ಹಾರ್ದಿಕ್ ಎಸೆತವನ್ನು ಭರ್ಜರಿಯಾಗಿ ಆಕಾಶಕ್ಕೆ ಭಾರಿಸಿದ್ದರು. ಚೆಂಡು ಆಕಾಶದಲ್ಲಿದ್ದಾಗ ನನಗೆ ಅನ್ನಿಸಿದು ಇದನ್ನು ಕ್ಯಾಚ್ ಪಡೆಯಲೇ ಬೇಕು ಎಂದು.. ರೋಹಿತ್ ಶರ್ಮಾ ಸಾಮಾನ್ಯವಾಗಿ ಲಾಂಗ್-ಆನ್‌ನಲ್ಲಿ ನಿಲ್ಲುವುದಿಲ್ಲ. ಚೆಂಡು ಆಗಸದಲ್ಲಿರುವಂತೆಯೇ ಯಾರು ಕ್ಯಾಚ್ ಪಡೆಯಬೇಕು ಎಂದು ಇಬ್ಬರೂ ಪರಸ್ಪರ ನೋಡಿದೆವು. ಆದರೆ ಚೆಂಡು ಹಿಡಿಯುವುದು ನನ್ನ ಗುರಿಯಾಗಿತ್ತು. ರೋಹಿತ್ ಕೂಡ ಹತ್ತಿರದಲ್ಲೇ ಇದ್ದರು. ನಾನು ಚೆಂಡಿನ ಕಡೆಗೆ ಓಡಿದೆ. ಮೇಲೆ ಹಾರಿ ಚೆಂಡು ಕ್ಯಾಚ್ ಪಡೆವ ವೇಳೆ ಬೌಂಡರಿ ಲೈನ್ ಟಚ್ ಆಗುತ್ತದೆ ಎಂದು ಮತ್ತೆ ಚೆಂಡನ್ನು ಮೇಲೆ ಎಸೆದು ಬೌಂಡರಿ ಲೈನ್ ದಾಟಿ ಬಳಿಕ ಒಳಗೆ ಜಿಗಿದು ಕ್ಯಾಚ್ ಪಡೆದೆ ಎಂದು ಹೇಳಿದ್ದಾರೆ.
ಅಂತೆಯೇ ಆ ಕ್ಷಣವನ್ನು ನನ್ನಿಂದ ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸೂರ್ಯ ಕುಮಾರ್, ಆ 4-5 ಸೆಕೆಂಡ್‌ಗಳು ಏನಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಬಳಿಕ ಕ್ಯಾಚ್ ಪಡೆದಾಗಿತ್ತು. ಆ ಕ್ಯಾಚ್ ಪಡೆದ ಬಳಿಕ ನನಗೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ವಿವರಿಸಲು ಅಸಾಧ್ಯ. ಜನರು ಕರೆ ಮಾಡುತ್ತಿದ್ದಾರೆ. ಸಂದೇಶ ಕಳುಹಿಸುತ್ತಿದ್ದಾರೆ. ನನ್ನ ಫೋನ್‌ನಲ್ಲಿ 1,000 ಕ್ಕೂ ಹೆಚ್ಚು ಓದದೇ ಇರುವ ವಾಟ್ಸಪ್ ಸಂದೇಶಗಳಿವೆ. ಆ ಐದು ಸೆಕೆಂಡ್‌ಗಳಲ್ಲಿ ನಾನು ಅಲ್ಲಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಸೂರ್ಯ ಕುಮಾರ್ ಹೇಳಿದ್ದಾರೆ.
ಬೌಂಡರಿ ಲೈನ್ ಟಚ್ ಆಗಿರಲಿಲ್ಲ
ಇದೇ ವೇಳೆ ಕ್ಯಾಚ್ ವಿವಾದದ ಕುರಿತೂ ಸ್ಪಷ್ಟನೆ ನೀಡಿರುವ ಸೂರ್ಯ ಕುಮಾರ್, 'ನಾನು ಚೆಂಡನ್ನು ಕ್ಯಾಚ್ ತೆಗೆದುಕೊಂಡಾಗ, ನಾನು ಬೌಂಡರಿ ಲೈನ್ ಹಗ್ಗವನ್ನು ಟಚ್ ಮಾಡಿಲ್ಲ ಎಂದು ನನಗೆ ತಿಳಿದಿತ್ತು. ನಾನು ಜಾಗರೂಕತೆಯಿಂದ ಇದ್ದ ಏಕೈಕ ವಿಷಯವೆಂದರೆ ನಾನು ಚೆಂಡನ್ನು ಹಿಂದಕ್ಕೆ ಎಸೆದಾಗ ನನ್ನ ಪಾದಗಳು ಬೌಂಡರಿ ಲೈನ್ ಹಗ್ಗವನ್ನು ಮುಟ್ಟಿರಲಿಲ್ಲ. ಅದು ನನಗೆ ತಿಳಿದಿತ್ತು.
ಒಂದು ವೇಳೆ ಆ ಎಸೆತ ಸಿಕ್ಸರ್ ಗೆ ಹೋಗಿದ್ದರೂ ಆಗ ಈಕ್ವೇಷನ್ ಎಸೆತಕ್ಕೆ 10 ರನ್ ಬೇಕಿತ್ತು. ಆಗಲೂ ನಾವು ಗೆಲುವು ಸಾಧಿಸುತ್ತಿದ್ದೆವು ಎಂದು ಸೂರ್ಯ ಕುಮಾರ್ ಯಾದವ್ ಸ್ಪಷ್ಟಪಡಿಸಿದ್ದಾರೆ.
Advertisement