
ಹರಾರೆ: ಹರಾರೆಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬುಧವಾರ ರಾತ್ರಿ ನಡೆದ 3ನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು 23 ರನ್ ಗಳಿಂದ ಸೋಲಿಸಿದ ಭಾರತ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 2 ಸಿಕ್ಸರ್, 4 ಬೌಂಡರಿಗಳೊಂದಿಗೆ 36 ರನ್ ಗಳಿಸಿದರೆ, ನಾಯಕ ಶುಭ್ ಮನ್ ಗಿಲ್ 3 ಸಿಕ್ಸರ್, 7 ಬೌಂಡರಿಗಳೊಂದಿಗೆ 66 ರನ್ ಕಲೆಹಾಕುವ ಮೂಲಕ ಉತ್ತಮ ಅಡಿಪಾಯ ಹಾಕಿದರು.
ಬಳಿಕ ಅಭಿಷೇಕ್ ಶರ್ಮಾ 10, ಋತುರಾಜ್ ಗಾಯಕ್ವಾಡ್ 3 ಸಿಕ್ಸರ್, 4 ಬೌಂಡರಿಗಳೊಂದಿಗೆ 28 ಎಸೆತಗಳಲ್ಲಿ 49 ರನ್ ಗಳಿಸಿ ಮುಜರಬಾನಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಯಾಮ್ಸನ್ 12, ರಿಂಕು ಸಿಂಗ್ 1 ರನ್ ಗಳೊಂದಿಗೆ ಭಾರತ 182 ರನ್ ಕಲೆಹಾಕಿತು.
ಭಾರತ ನೀಡಿದ 183 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಜಿಂಬಾಬ್ವೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಅಜೇಯ 65 ರನ್ ಗಳಿಸಿ ಕೊನೆವರಗೂ ಹೋರಾಟ ನಡೆಸಿದರು. ಆದರೆ, ಅವರಿಗೆ ಕ್ಲೈವ್ ಮದಂಡೆ (37) ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ. ಹೀಗಾಗಿ ನಿಗದಿತ ಓವರ್ ಗಳಲ್ಲಿ 159 ರನ್ ಗಳಿಸುವ ಮೂಲಕ ಜಿಂಬಾಬ್ವೆ ಸೋಲಿಗೆ ಶರಣಾಯಿತು. ಭಾರತ ಪರ ವಾಷಿಂಗ್ಟನ್ ಸುಂದರ್ 3, ಅವೇಶ್ ಖಾನ್ 2, ಖಲೀಲ್ ಅಹ್ಮದ್ 1 ವಿಕೆಟ್ ಪಡೆದರು. ಈ ಮೂಲಕ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.
Advertisement