
ಬೆಂಗಳೂರು: ಈ ಹಿಂದೆ ಹಲವು ಅವಕಾಶಗಳನ್ನು ಕೈಚೆಲ್ಲಿದ್ದ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ತವರಿನಲ್ಲಿ ಚೊಚ್ಚಲ ಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಉಳಿದ ಪಂದ್ಯಗಳಲ್ಲಿಯೂ ಇದೇ ರೀತಿಯ ಪ್ರದರ್ಶನ ಮುಂದುವರೆಸುವ ಭರವಸೆ ಹೊಂದಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮಂಧಾನ, ಅವರು ಭರ್ಜರಿ 117 ರನ್ ಗಳಿಸುವ ಮೂಲಕ 143 ರನ್ ಗಳ ಭರ್ಜರಿ ಜಯವನ್ನು ಭಾರತ ದಾಖಲಿಸಿತು. ಅಲ್ಲದೇ, ಸ್ಮೃತಿ ಮಂಧಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000 ರನ್ ಗಡಿ ದಾಟಿ ವಿಶೇಷ ಮೈಲಿಗಲ್ಲು ತಲುಪಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಬಳಿಕ 7000 ರನ್‌ಗಳ ಗಡಿ ದಾಟಿದ ಭಾರತದ ಮಹಿಳಾ ತಂಡದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಮೃತಿ ಮಂಧಾನ, ಕಳೆದ ನಾಲ್ಕೈದು ವರ್ಷಗಳಲ್ಲಿ ತುಂಬಾ ನಿರಾಸೆಯಾಗಿತ್ತು. ತವರಿನಲ್ಲಿ ಏಕದಿನ ಪಂದ್ಯ ಆಡಿದಾಗಲೆಲ್ಲಾ, 70-80 ರನ್ ಗಳಲ್ಲಿ ನನ್ನ ವಿಕೆಟ್ ಹೋಗುತಿತ್ತು.ಇಂದು ವಿಕೆಟ್ ಕಾಪಾಡಿಕೊಳ್ಳುವ ಮೂಲಕ ಮೊದಲ ಶತಕ ಗಳಿಸಿರುವುದು ತುಂಬಾ ಸಂತಸ ತಂದಿದೆ. ಇದೇ ರೀತಿಯ ಪ್ರದರ್ಶನವನ್ನು ಉಳಿದ ಪಂದ್ಯಗಳಲ್ಲಿಯೂ ಮುಂದುವರೆಸುತ್ತೇನೆ ಎಂದರು.
ಆದಾಗ್ಯೂ, ಆರು ಮತ್ತುಏಳನೇ ವಿಕೆಟ್ ಗೆ ಅದ್ಬುತ ಬೆಂಬಲ ನೀಡಿದ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ಅವರಿಗೆ ಕ್ರೆಡಿಟ್ ನೀಡಿದರು. ದೀಪ್ತಿ ಮತ್ತು ಪೂಜಾ ಜೊತೆಗಿನ ಪಾರ್ಟನರ್ ಶಿಪ್ ನಿಜವಾಗಿಯೂ ಮುಖ್ಯವೆಂದು ಭಾವಿಸುತ್ತೇನೆ.
ದೀಪ್ತಿ ಹಾಗೂ ಪೂಜಾ ಇಬ್ಬರೂ ಉತ್ತಮ ಬ್ಯಾಟ್ಸ್ ಮನ್ ಗಳು. ಹೀಗಾಗಿ ಏನಾಗಬಹುದು ಎಂಬುದರ ಬಗ್ಗೆ ಚಿಂತಿಸಲಿಲ್ಲ. ಕ್ರೀಸ್ ನಲ್ಲಿ ಸ್ವಲ್ಪ ಹೊತ್ತು ಇರುವಂತೆ ಮಾತ್ರ ಮಾತನಾಡಿಕೊಂಡಿದ್ದಾಗಿ ತಿಳಿಸಿದರು.
Advertisement