
ಬೆಂಗಳೂರು: ಐಸಿಸಿ ಚಾಂಪಿಯನ್ ಷಿಪ್ ಟೂರ್ನಿಯ ನಿಮಿತ್ತ ಇಂದು ಬೆಂಗಳೂರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ 143 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ್ದ 266ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ 37.4 ಓವರ್ ನಲ್ಲೇ 122 ರನ್ ಗಳಿಗೇ ಆಲೌಟ್ ಆಗುವ ಮೂಲಕ 143 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಆಫ್ರಿಕಾ ಪರ ಸುನ್ ಲೂಸ್ 33 ರನ್, ಮರಿಜಾನ್ನೆ ಕ್ಯಾಪ್ 24 ಮತ್ತು ಸಿನಾಲೋ ಜಾಫ್ತಾ ಅಜೇಯ 27 ರನ್ ಗಳಿಸಿದರು. ಆದರು ಉಳಿದಾವ ಆಟಾಗರ್ತಿಯರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ.
ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಆಶಾಶೋಭಾನ 4 ವಿಕೆಟ್ ಪಡೆದು ಮಿಂಚಿದರೆ, ದೀಪ್ತಿ ಶರ್ಮಾ 2 ಮತ್ತು ರಾಧಾ ಯಾದವ್, ಪೂಜಾ ವಸ್ತ್ರಾಕರ್ ಮತ್ತು ರೇಣುಕಾ ಠಾಕೂರ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಂತೆಯೇ ಐಸಿಸಿ ಚಾಂಪಿಯನ್ ಶಿಪ್ ನಲ್ಲಿ ಮತ್ತೊಂದು ಗೆಲುವು ತನ್ನದಾಗಿಸಿಕೊಂಡಿದೆ.
ಸ್ಮೃತಿ ಮಂದಾನ ಭರ್ಜರಿ ಶತಕ, ಭಾರತ ಅಮೋಘ ಬ್ಯಾಟಿಂಗ್
ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಮೃತಿ ಮಂದಾನ (117 ರನ್) ಭರ್ಜರಿ ಶತಕ, ದೀಪ್ತಿ ಶರ್ಮಾ (37 ರನ್) ಮತ್ತು ಪೂಜಾ ವಸ್ತ್ರಾಕರ್ ಅಜೇಯ 31 ರನ್ ಗಳ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 8ವಿಕೆಟ್ ನಷ್ಟಕ್ಕೆ 265ರನ್ ಕಲೆಹಾಕಿತು.
Advertisement