
ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಕೋಚ್ ಆಗಿ ಭಾರತ ಕ್ರಿಕೆಟ್ ತಂಡ ಮಾಜಿ ಸ್ಟಾರ್ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದು ಅವರ ಎಲ್ಲ ಷರತ್ತುಗಳಿಗೆ ಬಿಸಿಸಿಐ ಒಪ್ಪಿದೆ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ಗೌತಮ್ ಗಂಭೀರ್ ರನ್ನು ಬಿಸಿಸಿಐನ ಸಿಇಸಿ ತಂಡ ಸಂದರ್ಶನ ಮಾಡಿದ್ದು ಈ ವೇಳೆ ಗೌತಮ್ ಗಂಭೀರ್ ತಾವು ತಂಡದ ಕೋಚ್ ಆಗಲು ಇರಿಸಿದ್ದ ಎಲ್ಲ ಷರತ್ತುಗಳನ್ನು ಬಿಸಿಸಿಐ ಒಪ್ಪಿದೆ ಎನ್ನಲಾಗಿದೆ. ಪ್ರಮುಖವಾಗಿ ಕ್ರಿಕೆಟ್ ಮೂರು ಮಾದರಿಗಳಿಗೆ ಮೂರು ಬಗೆಯ ತಂಡ ರಚನೆ ಮಾಡಬೇಕೆಂಬ ಗೌತಿ ನಿರ್ಧಾರಕ್ಕೆ ಬಿಸಿಸಿಐ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಇದೀಗ ಇದೇ ವಿಚಾರವಾಗಿ ಇಂದು ಗೌತಮ್ ಗಂಭೀರ್ ಬಿಸಿಸಿಐ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ನೂತನ ಕೋಚ್ ಹುದ್ದೆಯ ಅವಧಿ ಜುಲೈ 2024 ರಿಂದ ಡಿಸೆಂಬರ್ 2027 ರವರೆಗೆ ಎಲ್ಲಾ ಮೂರು ಸ್ವರೂಪಗಳಿಗೆ-ಟೆಸ್ಟ್, ODI ಮತ್ತು T20I ಗಳಿಗೆ ಹೊಸ ಕೋಚ್‌ನ ಒಪ್ಪಂದವು ಮಾನ್ಯವಾಗಿರುತ್ತದೆ.
ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರವಾಗಿ ಬಹು ತಿಂಗಳುಗಳಿಂದ ಭುಗಿಲೆದ್ದಿದ್ದ ಚರ್ಚೆಗೆ ಇಂದೇ ಅಂತಿಮ ತೆರೆ ಬೀಳುವ ಸಾಧ್ಯತೆ ಇದ್ದು, ಹಾಲಿ ಕೋಚ್ ರಾಹುಲ್ ದ್ರಾವಿಡ್ ರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.
ಜೂನ್ 18 ರಂದು ಮುಂಬೈನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಲು ಗಂಭೀರ್ ಸಂದರ್ಶನಕ್ಕೆ ಹಾಜರಾಗಿದ್ದರು. ಗಂಭೀರ್ ಅವರು ಮಂಗಳವಾರ ಮಧ್ಯಾಹ್ನ 2-4 ಗಂಟೆಯ ನಡುವೆ ಜಯ್ ಶಾ ಮತ್ತು ಇತರರನ್ನು ಭೇಟಿಯಾಗಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
Advertisement