ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ದೃಢಪಡಿಸಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಫೆಬ್ರುವರಿಯಲ್ಲಿ ಅವರು ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಶಮಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ಶಮಿ ಗುಜರಾತ್ ಜೈಂಟ್ಸ್ ತಂಡಕ್ಕೆ ಆಡಬೇಕಿತ್ತು.
'ವೇಗದ ಬೌಲರ್ ತನ್ನ ಹಿಮ್ಮಡಿ ಸಮಸ್ಯೆಯಿಂದಾಗಿ ಫೆಬ್ರುವರಿ 26ರಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಬಿಸಿಸಿಐ ವೈದ್ಯಕೀಯ ತಂಡ ನಿಗಾ ವಹಿಸುತ್ತಿದ್ದು, ಮುಂಬರುವ ಟಾಟಾ ಐಪಿಎಲ್ 2024ರಿಂದ ಹೊರಗುಳಿಯುತ್ತಿದ್ದಾರೆ' ಎಂದು ಬಿಸಿಸಿಐ ಹೇಳಿದೆ.
2023ರ ಏಕದಿನ ವಿಶ್ವಕಪ್ ಪಂದ್ಯದ ಸಮಯದಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಶಮಿ, ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತ ನಂತರ ಯಾವುದೇ ಪಂದ್ಯದಲ್ಲೂ ಆಡಿರಲಿಲ್ಲ.
ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ T20I ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ದೂರಉಳಿದಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. ಬಳಿಕ ಯುನೈಟೆಡ್ ಕಿಂಗ್‌ಡಂನಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮತ್ತೊಂದೆಡೆ, ಬಿಸಿಸಿಐ ಪ್ರಸಿದ್ಧ್ ಕೃಷ್ಣ ಅವರ ಫಿಟ್ನೆಸ್ ಕುರಿತು ಮಾಹಿತಿ ನೀಡಿದೆ. 'ವೇಗದ ಬೌಲರ್ ಫೆಬ್ರುವರಿ 23ರಂದು ಎಡಗಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪುನರಾರಂಭಿಸಲಿದ್ದಾರೆ. ಅವರು ಕೂಡ ಮುಂಬರುವ ಟಾಟಾ ಐಪಿಎಲ್ 2024ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ' ಎಂದು ಬಿಸಿಸಿಐ ತಿಳಿಸಿದೆ.
ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಕೂಡ ಚೇತರಿಸಿಕೊಂಡ ಬಗ್ಗೆ ಬಿಸಿಸಿಐ ಮಂಗಳವಾರ ಮಾಹಿತಿ ನೀಡಿದೆ. ಮುಂಬರುವ ಐಪಿಎಲ್ 2024 ನಲ್ಲಿ ಅವರು ಭಾಗವಹಿಸಲು ಫಿಟ್ ಆಗಿದ್ದಾರೆ ಎಂದು ಘೋಷಿಸಲಾಗಿದೆ. ಪಂತ್ ಡಿಸೆಂಬರ್ 30, 2022ರಂದು ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಬಳಿಕ ಅವರು ಕಳೆದ ಐಪಿಎಲ್ ಆವೃತ್ತಿಯಿಂದಲೂ ಹೊರಗುಳಿದಿದ್ದರು.
Advertisement