
ಅಹ್ಮದಾಬಾದ್: ಐಪಿಎಲ್ 2024 ಟೂರ್ನಿಯ ನಿನ್ನೆಯ ನಿರ್ಣಾಯಕ ಹಣಾಹಣಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದರೂ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ ಮನ್ ಗಿಲ್ ತೀವ್ರ ಅಸಮಾಧಾನಗೊಂಡಿದ್ದು, ಇದರ ನಡುವೆ ಗಾಯದ ಮೇಲೆ ಬರೆ ಎಂಬಂತೆ ಬಿಸಿಸಿಐ ಗುಜರಾತ್ ಟೈಟನ್ಸ್ ಇಡೀ ತಂಡಕ್ಕೆ ಭಾರಿ ದಂಡ ಹೇರಿದೆ.
ಹೌದು.. ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ CSK ಮತ್ತು GT ನಡುವಿನ ಪಂದ್ಯದಲ್ಲಿ ಗುಜರಾತ್ ತಂಡ 35 ರನ್ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್ ಹಂತದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 231 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 196 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇಡೀ ಗುಜರಾತ್ ತಂಡಕ್ಕೆ ದಂಡ
ಈ ಪಂದ್ಯದಲ್ಲಿ ಇಡೀ ಗುಜರಾತ್ ತಂಡಕ್ಕೆ ಬಿಸಿಸಿಐ ದಂಡ ಹೇರಿದೆ. ಚೆನ್ನೈ ಬ್ಯಾಟಿಂಗ್ ವೇಳೆ ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಗುಜರಾತ್ ತಂಡದ ನಾಯಕ ಶುಭ್ ಮನ್ ಗಿಲ್ ಸೇರಿದಂತೆ ಇಡೀ ತಂಡಕ್ಕೆ ಬಿಸಿಸಿಐ ದಂಡ ಹೇರಿದೆ. ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಇದು ಈ ಋತುವಿನಲ್ಲಿ ಇದು ಅವರ ತಂಡದ ಎರಡನೇ ಓವರ್ ರೇಟ್ ಅಪರಾಧವಾಗಿದೆ.
ಉಳಿದಂತೆ ತಂಡದ ಇತರೆ ಸದಸ್ಯರು ಅಂದರೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಎಲ್ಲ ಆಟಗಾರರಿಗೆ ತಲಾ 6 ಲಕ್ಷ ರೂ ಅಂದರೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ.
ಗಿಲ್ ಅಸಮಾಧಾನ
ಇನ್ನು ಈ ಪಂದ್ಯದಲ್ಲಿ ಗೆಲುವಿನ ಹೊರತಾಗಿಯೂ ಗುಜರಾತ್ ತಂಡದ ನಾಯಕ ಶುಭ್ ಮನ್ ಗಿಲ್ ತಂಡದ ಪ್ರದರ್ಶನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪಂದ್ಯದಲ್ಲಿ ನಾವು 250 ಕ್ಕೂ ಹೆಚ್ಚು ರನ್ ಗಳಿಸಲು ಯೋಚಿಸಿದ್ದೆವು. ಆದರೆ ಕೊನೆಯಲ್ಲಿ ಸಿಎಸ್‌ಕೆ ಬೌಲರ್ಸ್ ಉತ್ತಮ ಪ್ರದರ್ಶನ ತೋರಿದ್ದರಿಂದ ನಮ್ಮ ಯೋಜನೆಯಂತೆ ರನ್ ಗಳಿಸಲು ಆಗಲಿಲ್ಲ. ನಮಗೆ 10-15 ರನ್ ಕಡಿಮೆಯಾಗಿದೆ. ನಾವು ನೆಟ್ ರನ್ ರೇಟ್‌ನಲ್ಲಿ ಮುಂದೆ ಹೋಗಲು ಕೆಲವು ರನ್‌ಗಳು ಕಡಿಮೆಯಾಯಿತು' ಎಂದು ಗಿಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೇಳಿದರು.
ಆರ್ ಸಿಬಿಗೆ ಮತ್ತೊಂದು ಸವಾಲು
ಗುಜರಾತ್ ಗೆಲುವಿನ ಮೂಲಕ ಆರ್ಸಿಬಿಯ ಪ್ಲೇಆಫ್ ಪ್ರವೇಶಕ್ಕೆ ಮತ್ತೊಂದು ಸವಾಲು ಎದುರಾಗಿದ್ದು, ಗುಜರಾತ್ ಟೈಟನ್ಸ್ ಕೂಡ 10 ಅಂಕಗಳನ್ನು ಪಡೆದಿದ್ದು ಆರ್ಸಿಬಿಯ ಸಮಾನವಾಗಿ ನಿಂತಿದೆ. ಹೀಗಾಗಿ ಪ್ಲೇಆಫ್ಗೆ ಪೈಪೋಟಿ ಅಧಿಕವಾಗಿದೆ. ಈ ಗೆಲುವಿನೊಂದಿಗೆ ಗುಜರಾತ್ ತಂಡ ಎರಡು ಸ್ಥಾನ ಮೇಲಕ್ಕೇರಿ 8ನೇ ಸ್ಥಾನಕ್ಕೆ ಬಂದಿದೆ. ಚೆನ್ನೈ ನಾಲ್ಕನೇ ಸ್ಥಾನದಲ್ಲಿಯೇ ಇದೆ. ಮುಂಬೈ 9 ರಲ್ಲಿ ಇದ್ದರೆ ಪಂಜಾಬ್ 10ರಲ್ಲಿದೆ. ಮುಂಬೈ ಮತ್ತು ಪಂಜಾಬ್ ಎರಡೂ ತಂಡಗಳ ಪ್ಲೇ ಆಫ್ ಕನಸು ಭಗ್ನವಾಗಿದೆ.
Advertisement