
ಬೆಂಗಳೂರು: ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಗೆಲುವಿನ ನಂತರ ವಿರಾಟ್ ಕೊಹ್ಲಿ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 'ಯೂನಿವರ್ಸ್ ಬಾಸ್' ಮತ್ತು ಫ್ರಾಂಚೈಸಿಯ ಐಕಾನ್ ಕ್ರಿಸ್ ಗೇಲ್ ಅವರೊಂದಿಗೆ ಹೃದಯಸ್ಪರ್ಶಿ ಸಂಭಾಷಣೆಯನ್ನು ನಡೆಸಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ನೇ ಆವೃತ್ತಿಯಲ್ಲಿ ಆರಂಭದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಆರ್‌ಸಿಬಿ ನಂತರ ಸತತವಾಗಿ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸದ್ಯ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಶನಿವಾರ ತಮ್ಮ ತವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆಯನ್ನು ಸೋಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶಿಸಿತು.
ಆರ್‌ಸಿಬಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೋಮವಾರ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರೊಂದಿಗೆ ಗೇಲ್ ಮಾತುಕತೆಯಲ್ಲಿ ತೊಡಗಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವೇಳೆ, ವಿರಾಟ್ ಕೊಹ್ಲಿ, ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ಮತ್ತೆ ಬರುವಂತೆ ಗೇಲ್‌ಗೆ ತಮಾಷೆ ಮಾಡಿದರು.
'ಮುಂದಿನ ವರ್ಷ ತಂಡಕ್ಕೆ ಹಿಂತಿರುಗಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮವಿದೆ. ನೀವು ಇನ್ನು ಮುಂದೆ ಫೀಲ್ಡಿಂಗ್ ಮಾಡಬೇಕಾಗಿಲ್ಲ. ಇದನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ' ಎಂದು ವಿರಾಟ್ ಹೇಳಿದ್ದಾರೆ.
2012 ರಲ್ಲಿ ಆರ್‌ಸಿಬಿ ಪರ 59 ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಹೊಂದಿರುವ ಗೇಲ್, ಈ ಆವೃತ್ತಿಯಲ್ಲಿ ಎಷ್ಟು ಸಿಕ್ಸರ್ ಸಿಡಿಸಿದ್ದೀರಿ ಎಂದು ವಿರಾಟ್ ಅವರನ್ನು ವಿಚಾರಿಸಿದರು. ಇದಕ್ಕೆ ವಿರಾಟ್ ಹೆಮ್ಮೆಯಿಂದ 37 ಎಂದು ಉತ್ತರಿಸಿದ್ದಾರೆ.
ನಂತರ, ವಿರಾಟ್, ಗೇಲ್‌ಗೆ ತಮ್ಮ 18ನೇ ನಂಬರಿನ ಸಹಿ ಮಾಡಿದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು.
2011-17ರಲ್ಲಿ ಆರ್‌ಸಿಬಿ ಪರ 85 ಪಂದ್ಯಗಳನ್ನು ಆಡಿರುವ ಗೇಲ್ 43.33 ಸರಾಸರಿಯಲ್ಲಿ 152 ಸ್ಟ್ರೈಕ್ ರೇಟ್‌ನೊಂದಿಗೆ 3,163 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು 19 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ 175* ಆಗಿದೆ. ಅವರು ಎಬಿ ಡಿವಿಲಿಯರ್ಸ್ ಮತ್ತು ವಿನಯ್ ಕುಮಾರ್ ಅವರೊಂದಿಗೆ ಆರ್‌ಸಿಬಿಯ ಹಾಲ್ ಆಫ್ ಫೇಮ್‌ನ ಭಾಗವಾಗಿದ್ದಾರೆ.
Advertisement