
ಮುಂಬೈ: ಹಾಲಿ ಐಪಿಎಲ್ ಟೂರ್ನಿ ಮುಕ್ತಾಯದ ಹಂತದಲ್ಲಿದ್ದು, ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಲ್ಲ.. ಬದಲಿಗೆ ರೋಹಿತ್ ಶರ್ಮಾ ಸೇರಿದಂತೆ ತಂಡದ ಹಿರಿಯ ಆಟಗಾರರು ಕಾರಣ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಐಪಿಎಲ್ 2024 ಕ್ಕೆ ಮುಂಚಿತವಾಗಿ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಮುಂಬೈ ಇಂಡಿಯನ್ಸ್ ದಾಖಲೆಯ ಒಪ್ಪಂದಕ್ಕೆ ಖರೀದಿಸಿತ್ತು. ನಂತರ, ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಮುಂಬೈ ನಾಯಕನನ್ನಾಗಿ ಮಾಡಲಾಯಿತು. ಈ ವೇಳೆ ಅಭಿಮಾನಿಗಳಿಂದ ಕೆಟ್ಟ ಪ್ರತಿಕ್ರಿಯೆ ವ್ಯಕ್ತಗೊಂಡಿತು.
ಕ್ರೀಡಾ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಹರ್ಭಜನ್ ಸಿಂಗ್, 'ಮುಂಬೈ ಇಂಡಿಯನ್ಸ್ ದೊಡ್ಡ ಬಳಗವನ್ನು ಹೊಂದಿದೆ. ನಾನು ಆ ತಂಡಕ್ಕೆ ಆಡಿದ್ದೇನೆ. ಮ್ಯಾನೇಜ್ಮೆಂಟ್ ಉತ್ತಮವಾಗಿದೆ. ತಂಡವನ್ನು ಉತ್ತಮವಾಗಿ ನಡೆಸುತ್ತದೆ. ಆದರೆ ಈ ನಿರ್ಧಾರವು ಹಿನ್ನಡೆಯನ್ನುಂಟು ಮಾಡಿದೆ. ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇತ್ತು. ಅವರು ಒಗ್ಗಟ್ಟಾಗಿ ಕಾಣದ ಕಾರಣ ಅದು ತಂಡದೊಂದಿಗೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ. ಇಷ್ಟು ದೊಡ್ಡ ತಂಡವಾಗಿದ್ದು ನನ್ನ ಹಳೆಯ ತಂಡವು ಇಂತಹ ಕಳಪೆ ಫಲಿತಾಂಶಗಳನ್ನು ಎದುರಿಸುತ್ತಿರುವುದನ್ನು ನೋಡಿ ನನಗೆ ನೋವಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಬಹುಶಃ ನಿರ್ಧಾರದ ಸಮಯ ಸರಿಯಾಗಿರಲಿಲ್ಲ. ಒಂದು ವರ್ಷದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಉತ್ತಮವಾಗುತ್ತಿತ್ತು. ಇದು ಹಾರ್ದಿಕ್ ಅವರ ತಪ್ಪಲ್ಲ, ಅವರು ಜಿಟಿಯಲ್ಲಿ ನಿಜವಾಗಿಯೂ ಉತ್ತಮವಾಗಿ ನಾಯಕರಾಗಿದ್ದರು. ನಾಯಕ ಯಾರೇ ಆಗಿರಲಿ ಆಟಗಾರರನ್ನು ಒಗ್ಗಟ್ಟಾಗಿಡುವುದು ಹಿರಿಯ ಆಟಗಾರರ ಕರ್ತವ್ಯ. ಕ್ಯಾಪ್ಟನ್ ಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಅವರು ಒಂದು ತಂಡದಂತೆ ಆಡಲಿಲ್ಲ ಎಂದು ಭಜ್ಜಿ ಅಭಿಪ್ರಾಯಪಟ್ಟರು.
Advertisement