
ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ನಿರ್ಗಮನದಿಂದ ತೆರವಾಗಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟವನ್ನು ತೀವ್ರಗೊಳಿಸಿದ್ದು, ಹಲವಾರು ಹೆಸರಾಂತ ಮಾಜಿ ಕ್ರಿಕೆಟಿಗರ ಹೆಸರುಗಳು ಕೇಳಿಬಂದಿವೆ. ಮುಖ್ಯ ಕೋಚ್ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಅವರ ಹೆಸರುಗಳು ಕೇಳಿಬಂದಿವೆ. ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್, ಸ್ಟೀಫನ್ ಫ್ಲೆಮಿಂಗ್ ಮೊದಲಾದವರು ಕೂಡ ಬಿಸಿಸಿಐ ಶಾರ್ಟ್‌ಲಿಸ್ಟ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಬಿಸಿಸಿಐನ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಆಗಿರುವ ಗೌತಮ್ ಗಂಭೀರ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ, ಭಾರತದ ಮಾಜಿ ಬ್ಯಾಟರ್ ಆಗಿರುವ ಅವರು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ 'ಒಂದು ಷರತ್ತು' ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
'ಆಯ್ಕೆಯ ಗ್ಯಾರಂಟಿ' ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ. ಭಾರತದ ಮಾಜಿ ಬ್ಯಾಟರ್ ಕೇವಲ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾತ್ರ ಉತ್ಸುಕರಾಗಿಲ್ಲ. ಬದಲಿಗೆ ದ್ರಾವಿಡ್ ಅವರ ಬದಲಿಯಾಗಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡುವುದಾಗಿ ಖಚಿತತೆ ನೀಡಿದರೆ ಮಾತ್ರ ಗಂಭೀರ್ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮುಖ್ಯ ಕೋಚ್‌ನ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದ್ದು, ಎಷ್ಟು ಸಂಭಾವ್ಯ ತರಬೇತುದಾರರು ಈ ಹುದ್ದೆಗಾಗಿ ಮುಂದೆ ಬಂದಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲು ಮಂಡಳಿಯು ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಆದರೆ, ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತಹ ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತದ ಮುಖ್ಯ ಕೋಚ್ ಹುದ್ದೆಗೆ ತಮ್ಮನ್ನು ಸಂಪರ್ಕಿಸಲಾಗಿತ್ತು. ಆದರೆ, ತಾವು ಹುದ್ದೆಯನ್ನು ತಿರಸ್ಕರಿಸಿದ್ದೇವೆ ಎಂದಿರುವುದು ವರದಿಯಾಗಿದೆ.
ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಮತ್ತು ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರೆ, ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾರ್ಗದರ್ಶಕ ಸ್ಥಾನವನ್ನು ತೊರೆಯಬೇಕಾಗುತ್ತದೆ. ಗಂಭೀರ್ ಕೆಕೆಆರ್ ನಾಯಕರಾಗಿ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಈ ವರ್ಷ ಫ್ರಾಂಚೈಸಿ ತೋರಿಸಿರುವ ಅದ್ಭುತ ಪ್ರದರ್ಶನದ ಹಿಂದೆ ಗಂಭೀರ್ ಅವರ ಪಾತ್ರ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.
Advertisement