
ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಸರತ್ತು ನಡೆಸಿರುವಂತೆಯೇ ಆಯ್ಕೆಮಂಡಳಿದೆ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಪ್ರಸ್ತುತ, ಟೀಂ ಇಂಡಿಯಾದ (Team India) ಮುಖ್ಯ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿಯು ಮುಂಬರುವ ಟಿ20 ವಿಶ್ವಕಪ್ (T20 World Cup 2024) ನಂತರ ಕೊನೆಗೊಳ್ಳಲಿದೆ. ಇದಾದ ಬಳಿಕ ಜುಲೈ 1ರಂದು ನೂತನ ಮುಖ್ಯ ಕೋಚ್‌ಗೆ ಟೀಂ ಇಂಡಿಯಾದ ಕಮಾಂಡ್ ಹಸ್ತಾಂತರವಾಗಲಿದೆ.
ಆದರೆ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಈಗಾಗಲೇ ಸಾಕಷ್ಟು ಖ್ಯಾತನಾಮ ಆಟಗಾರರು ಈ ಹುದ್ದೆಯನ್ನು ನಿರಾಕರಿಸಿದ್ದು, ಇದು ಬಿಸಿಸಿಐಗೆ ದೊಡ್ಡ ತಲೆನೋವಿಗೆ ಕಾರಣವಾಗಿದೆ.
ಪ್ರಸ್ತುತ ಕೋಚ್ ಹುದ್ದೆ ರೇಸ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಕೂಡ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಅವರನ್ನೇ ಮುಖ್ಯ ಕೋಚ್ ಹುದ್ದೆಗೆ ಆರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಗಂಭೀರ್ ರನ್ನು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಿ ನೇಮಿಸಲು ಪ್ರಯತ್ನಿಸುತ್ತಿದ್ದು, ಗೌತಮ್ ಗಂಭೀರ್ ಅವರ ಎಲ್ಲಾ ಷರತ್ತುಗಳನ್ನು ಬಿಸಿಸಿಐ ಒಪ್ಪಿಕೊಂಡಿದ್ದು, ಅವರು ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
'ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ' ಎಂದ ''ದಾದಾ''
ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ‘ಆಟಗಾರನ ಜೀವನದಲ್ಲಿ ಕೋಚ್‌ನ ಪ್ರಾಮುಖ್ಯತೆ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ.
ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್‌ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಬರೆದುಕೊಂಡಿದ್ದಾರೆ.
ಗಂಗೂಲಿ ಅವರ ಈ ಪೋಸ್ಟ್ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Advertisement