ಮುಂಬೈ: ರವೀಂದ್ರ ಜಡೇಜ ಹಾಗೂ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ 235 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 19 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
ರವೀಂದ್ರ ಜಡೇಜ 65ಕ್ಕೆ 5 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 81ಕ್ಕೆ 4 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದರು. ಆದರೆ, ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆಯಿತು. ಯಶಸ್ವಿ ಜೈಸ್ವಾಲ್ (30) ಬಳಿಕ 8 ಎಸೆತಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ರೋಹಿತ್ ಶರ್ಮಾ (18) ಮೊಹಮ್ಮದ್ ಸಿರಾಜ್ (0) ಹಾಗೂ ವಿರಾಟ್ ಕೊಹ್ಲಿ (4) ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಕ್ರೀಸಿನಲ್ಲಿದ್ದಾರೆ.
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 14ನೇ ಸಲ ಐದು ವಿಕೆಟ್ ಪಡೆಯುವ ಮೂಲಕ ಅತ್ಯಂತ ಹೆಚ್ಚಿನ ವಿಕೆಟ್ ಪಡೆದಿರುವ ಭಾರತೀಯ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು. 314 ವಿಕೆಟ್ ಪಡೆಯುವುದರೊಂದಿಗೆ ರವೀಂದ್ರ ಜಡೇಜಾ ಪಟ್ಟಿಯಲ್ಲಿ 417 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಅವರಿಗಿಂತ ಹಿಂದೆ ಇದ್ದಾರೆ.
ಬೆಂಗಳೂರು ಪಂದ್ಯದಲ್ಲಿ 8 ವಿಕೆಟ್ ಹಾಗೂ ಪುಣೆ ಪಂದ್ಯದಲ್ಲಿ 113 ರನ್ ನಿಂದ ಸೋತು ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಹತಾಶ ಸ್ಥಿತಿಯಲ್ಲಿದ್ದು, ಫೈನಲ್ ಸ್ಪರ್ಧೆಯಿಂದ ದೂರ ಉಳಿಯುತ್ತಿರುವಂತೆ ಕಾಣುತ್ತಿದೆ.
Advertisement