ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ ಚಾಲ್ತಿಯಲ್ಲಿರುವಂತೆಯೇ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ದೌಡಾಯಿಸಿದ್ದಾರೆ.
ವೈಯುಕ್ತಿಕ ತುರ್ತು ಸನ್ನಿವೇಶದ ಹಿನ್ನಲೆಯಲ್ಲಿ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ವಾಪಸಾಗಿದ್ದು, ಕುಟುಂಬ ಸಮೇತರಾಗಿ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು "ವೈಯಕ್ತಿಕ ತುರ್ತು" ಕಾರಣದಿಂದ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಲಾಗಿದ್ದು, ನವೆಂಬರ್ 30 ರಿಂದ ಕ್ಯಾನ್‌ಬೆರಾದಲ್ಲಿ ಪ್ರಾರಂಭವಾಗುವ ಎರಡು ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಡಿಸೆಂಬರ್ 6 ರಿಂದ ಪ್ರಾರಂಭವಾಗುವ 'ಪಿಂಕ್ ಬಾಲ್ ಟೆಸ್ಟ್' ಮೊದಲು ಅಡಿಲೇಡ್‌ನಲ್ಲಿರುವ ತಂಡದೊಂದಿಗೆ ನೇರವಾಗಿ ಗಂಭೀರ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಗಂಭೀರ್ ತಮ್ಮ ವಾಪಸಾತಿಗೆ ಸಂಬಂಧಿಸಿದಂತೆ ಬಿಸಿಸಿಐನ ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಅನಿವಾರ್ಯ ವೈಯಕ್ತಿಕ ತುರ್ತುಸ್ಥಿತಿಯಿಂದಾಗಿ ಗಂಭೀರ್ ಅವರು ಬಿಸಿಸಿಐ ಅನುಮತಿ ಮೇರೆಗೆ ಮಂಗಳವಾರ ಮುಂಜಾನೆ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಅವರು ಎರಡನೇ ಟೆಸ್ಟ್ ಪಂದ್ಯದ ಆರಂಭದ ಮೊದಲು ಅಡಿಲೇಡ್‌ಗೆ ಹಿಂತಿರುಗುತ್ತಾರೆ" ಎಂದು BCCI ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 27 ರ ಬುಧವಾರದಂದು ಭಾರತೀಯ ತಂಡವು ಕ್ಯಾನ್‌ಬೆರಾಗೆ ತೆರಳಲಿದೆ, ಅಲ್ಲಿ ಇಡೀ ತಂಡವು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಳಿಕ ಎರಡು ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ತಂಡ ಪಾಲ್ಗೊಳ್ಳಲಿದೆ.
Advertisement