ಇಸ್ಲಾಮಾಬಾದ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಬಿಸಿಸಿಐ ಜೊತೆ ಜಟಾಪಟಿಗಳಿದಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ಗೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಾಗಿದ್ದು, ಪಾಕಿಸ್ತಾನಕ್ಕೆ ಬಂದಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಸ್ವದೇಶಕ್ಕೆ ವಾಪಸ್ ಆಗಿದೆ.
ಹೌದು.. ಪಾಕಿಸ್ತಾನದಲ್ಲಿ ಆಯೋಜನೆಯಾಗಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ‘ಎ’ ಸರಣಿ ರದ್ದಾಗಿದ್ದು, ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಪಾಕಿಸ್ತಾನವನ್ನು ತೊರೆದು ತವರು ಶ್ರೀಲಂಕಾಕ್ಕೆ ವಾಪಸ್ ಆಗುತ್ತಿದೆ. ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವತಃ ಪಿಸಿಬಿ ಮಾಹಿತಿ ನೀಡಿದೆ.
ಕಳೆದ ಕೆಲವು ದಿನಗಳಿಂದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವೆ ಸರಣಿ ನಡೆಯುತ್ತಿದ್ದು, ಮೊದಲ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯ ಮುಗಿದಿದೆ. ಪಾಕಿಸ್ತಾನ ಶಾಹೀನ್ ನಾಲ್ಕು ದಿನಗಳ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದ್ದು, ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆ.
ಆದರೆ ಕಳೆದ 48 ಗಂಟೆಗಳಿಂದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಸರಣಿಯನ್ನು ಸದ್ಯಕ್ಕೆ ಮುಂದೂಡಲು ನಿರ್ಧರಿಸಿದೆ. ಸರಣಿಯನ್ನು ಪೂರ್ಣಗೊಳಿಸಲು ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಈಗಾಗಲೇ ಈ ಹಿಂದೆ ಪಾಕಿಸ್ತಾನ ಪ್ರವಾಸದಲ್ಲಿ ಕಹಿ ಅನುಭವ ಹೊಂದಿರುವ ಶ್ರೀಲಂಕಾ ತಂಡ ಹಾಲಿ ರಾಜಕೀಯ ಸಂಘರ್ಷದಿಂದಾಗಿ ಸರಣಿ ಮೊಟಕು ಗೊಳಿಸಿ ತವರಿಗೆ ವಾಪಸ್ ಆಗಿದೆ.
ಪಾಕಿಸ್ತಾನದಲ್ಲಿ ಪ್ರತಿಭಟನೆ ತೀವ್ರ
ಇನ್ನು ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ, ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಅವರು ಇಸ್ಲಾಮಾಬಾದ್ ಮೆರವಣಿಗೆ ಘೋಷಿಸಿದ್ದು, ನಂತರ ಸಾವಿರಾರು ಬೆಂಬಲಿಗರು ಇಸ್ಲಾಮಾಬಾದ್ ಕಡೆಗೆ ಹೊರಟಿದ್ದಾರೆ.
ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್ ಗಡಿಯಲ್ಲಿ ಲಾಕ್‌ಡೌನ್ ಅನ್ನು ವಿಧಿಸಿತ್ತು, ಆದರೆ ನವೆಂಬರ್ 25 ರ ರಾತ್ರಿ, ಬೆಂಬಲಿಗರು ಈ ಲಾಕ್‌ಡೌನ್ ಅನ್ನು ಮುರಿದಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಮತ್ತು ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು, ಇದರಲ್ಲಿ 4 ಪಾಕಿಸ್ತಾನಿ ರೇಂಜರ್‌ಗಳು ಸಾವನ್ನಪ್ಪಿದ್ದಾರೆ. ಹಲವು ಪಿಟಿಐ ಬೆಂಬಲಿಗರು ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ಶ್ರೀಲಂಕಾ ತಂಡ ಸಂಭಾವ್ಯ ಅಪಾಯದಿಂದ ಪಾರಾಗಲು ಸರಣಿ ಮೊಟಕುಗೊಳಿಸಿದೆ ಎನ್ನಲಾಗಿದೆ.
ಪಿಸಿಬಿ ವಿರುದ್ಧ ವ್ಯಾಪಕ ಟ್ರೋಲ್
ಶ್ರೀಲಂಕಾ ಎ ತಂಡ ಪಾಕಿಸ್ತಾನದಿಂದ ಸರಣಿಯನ್ನ ಮೊಟಕುಗೊಳಿಸಿ ತವರಿಗೆ ಮರಳಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪಿಸಿಬಿಯನ್ನ ಟ್ರೋಲ್ ಮಾಡಲಾಗುತ್ತಿದೆ. ಒಂದು ಸಣ್ಣ ಸರಣಿಯನ್ನ ಆಯೋಜಿಸಲು ಸಾಧ್ಯವಾಗದಿದ್ದರು. 8 ದೊಡ್ಡ ತಂಡಗಳು ಭಾಗವಾಗುವ ದೊಡ್ಡ ಟೂರ್ನಮೆಂಟ್ ಹೇಗೆ ನಡೆಸುತ್ತೇ ಎಂದು ಪಿಸಿಬಿಯನ್ನು ಟ್ರೋಲ್ ಮಾಡಲಾಗುತ್ತಿದೆ.
Advertisement