ಸೋಮವಾರ ನಡೆದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ವೇಗಿ ಅಶ್ವನಿ ಕುಮಾರ್ ಎದುರಿಸಿದ ಸಂಕಷ್ಟಗಳನ್ನು ಹೊರಹಾಕಿದ್ದಾರೆ.
ಮೊಹಾಲಿಯ ಝಂಝೇರಿಯವರಾದ 23 ವರ್ಷದ ಸೀಮರ್, ತಮ್ಮ ಮೂರು ಓವರ್‌ಗಳಲ್ಲಿ 24 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೆಕೆಆರ್ ಅನ್ನು 116 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಈ ಬಾರಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಮೂಲ ಬೆಲೆಯಾದ 30 ಲಕ್ಷ ರೂ.ಗಳಿಗೆ ಮುಂಬೈ ತಂಡದ ಪಾಲಾಗಿದ್ದ ಅಶ್ವನಿ, ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಸುದ್ದಿಯಾಗಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿರುವ ಅಶ್ವನಿ ಅವರ ತಂದೆ ಹರ್ಕೇಶ್ ಕುಮಾರ್, 'ಮಳೆಯಿರಲಿ ಅಥವಾ ಬಿಸಿಲಿರಲಿ, ಅಶ್ವನಿ ಮೊಹಾಲಿಯಲ್ಲಿರುವ ಪಿಸಿಎಗೆ ಅಥವಾ ನಂತರ ಮುಲ್ಲನ್‌ಪುರದ ಹೊಸ ಕ್ರೀಡಾಂಗಣಕ್ಕೆ ಹೋಗಲು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಕೆಲವೊಮ್ಮೆ, ಆತ ಪಿಸಿಎ ಅಕಾಡೆಮಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದನು, ಲಿಫ್ಟ್ ತೆಗೆದುಕೊಳ್ಳುತ್ತಿದ್ದನು ಅಥವಾ ಶೇರಿಂಗ್ ಆಟೋಗಳಲ್ಲಿ ಹೋಗುತ್ತಿದ್ದನು' ಎಂದು ಹೇಳಿದ್ದಾರೆ.
'ಆತ ನನ್ನಿಂದ ಆಟೋಗಾಗಿ 30 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದನು ಎಂಬುದು ನನಗೆ ನೆನಪಿದೆ. ಆತನನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 30 ಲಕ್ಷ ರೂ.ಗೆ ಖರೀದಿಸಿದಾಗ, ಆತನಿಗೆ ನೀಡಿದ್ದ ಪ್ರತಿ ಪೈಸೆಯೂ ಯೋಗ್ಯವೆಂದು ನನಗೆ ಖಾತರಿಯಾಯಿತು. ಆತ ಪ್ರತಿ ವಿಕೆಟ್ ಪಡೆದ ನಂತರ, ತರಬೇತಿಯ ನಂತರ ರಾತ್ರಿ 10 ಗಂಟೆಗೆ ಹಿಂತಿರುಗುತ್ತಿದ್ದದ್ದು ಮತ್ತು ಮರುದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಹೊರಡುತ್ತಿದ್ದ ಆ ದಿನಗಳ ಬಗ್ಗೆ ನಾನು ಯೋಚಿಸುತ್ತೇನೆ' ಎಂದು ಅವರು ಹೇಳಿದರು.
ಅಶ್ವನಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಸೇರಲು ಪ್ರಯತ್ನ ಮಾಡಿದರಾದರೂ, ವಿಫಲರಾಗಿದ್ದರು. ಅಶ್ವನಿಗೆ ಜಸ್ಪ್ರೀತ್ ಬುಮ್ರಾ ಮತ್ತು ಮಿಚೆಲ್ ಸ್ಟಾರ್ಕ್ ಸ್ಪೂರ್ತಿ. ಐಪಿಎಲ್ 2025ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಬುಮ್ರಾ ಅವರ ಸ್ಥಾನವನ್ನು ತುಂಬುವ ಅವಕಾಶ ತನಗೆ ಸಿಗುತ್ತದೆ ಎಂದು ವೇಗಿಗೆ ತಿಳಿದಿರಲಿಲ್ಲ.
'ಆತ ಐಪಿಎಲ್ ತಂಡಗಳ ಟ್ರಯಲ್ಸ್‌ಗೆ ಹಾಜರಾಗಿದ್ದನು. ತಾನು ಯಾವಾಗಲೂ ಜಸ್ಪ್ರೀತ್ ಬುಮ್ರಾ ಮತ್ತು ಮಿಚೆಲ್ ಸ್ಟಾರ್ಕ್‌ರಂತೆ ಇರಬೇಕೆಂದು ಬಯಸಿದ್ದನು. ಆತನ ಸ್ನೇಹಿತರು ಅವನಿಗೆ ಕ್ರಿಕೆಟ್ ಬಾಲ್‌ಗಳನ್ನು ಖರೀದಿಸಲು ಹಣ ಸಂಗ್ರಹಿಸುತ್ತಿದ್ದರು. ಮುಂಬೈ ಇಂಡಿಯನ್ಸ್ ತಂಡ ಆತನನ್ನು 30 ಲಕ್ಷ ರೂ.ಗೆ ಖರೀದಿಸಿದಾಗ, ಆತ ಮಾಡಿದ ಮೊದಲ ಕೆಲಸವೆಂದರೆ ನಮ್ಮ ಹಳ್ಳಿಯ ಬಳಿಯ ಅಕಾಡೆಮಿಗಳಲ್ಲಿ ಕ್ರಿಕೆಟ್ ಕಿಟ್‌ಗಳು ಮತ್ತು ಬಾಲ್‌ಗಳನ್ನು ವಿತರಿಸಿದ್ದು. ನನ್ನದೇ ಹೆಸರಿರುವ ನನ್ನ ನೆಚ್ಚಿನ ಜೆರ್ಸಿಯನ್ನು ನಾನು ಧರಿಸುತ್ತೇನೆ ಎಂದು ಯಾವಾಗಲೂ ನನಗೆ ಹೇಳುತ್ತಿದ್ದನು. ಈ ಪಂದ್ಯದ ಮೂಲಕ ಆತ ತನ್ನ ಹೆಸರಿನ ಜೆರ್ಸಿಯನ್ನು ಧರಿಸಿದ್ದಾನೆ' ಎಂದು ಅವರ ಹಿರಿಯ ಸಹೋದರ ಶಿವ ರಾಣಾ ಹೇಳಿದರು.
ಅಶ್ವನಿ ಅವರಿಗೆ ಬೇಸನ್ ಕಾ ಚಿಲ್ಲಾ ಮತ್ತು ಆಲೂ ಪರಾಠ ಇಷ್ಟ. ಮುಂಬೈನಲ್ಲಿ ಪಂದ್ಯದ ನಂತರವೂ ಆತ ಅದನ್ನೇ ಬಯಸುತ್ತಿರುತ್ತಾನೆ ಎಂದು ಅವರ ತಾಯಿ ಹೇಳಿದ್ದಾರೆ.
Advertisement