
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದ್ದು, ಟೂರ್ನಿಯಲ್ಲಿ ಗೆಲುವು ದಾಖಲಿಸಿದೆ. ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡವನ್ನು ಕೇವಲ 116 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯುವ ವೇಗಿ ಅಶ್ವನಿ ಕುಮಾರ್. ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವು ಕಂಡಿದ್ದು, ನಿಟ್ಟುಸಿರು ಬಿಟ್ಟಿದೆ. ಚೊಚ್ಚಲ ಪಂದ್ಯದಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಅಶ್ವನಿ, ತಾವು ನಾಲ್ಕು ವಿಕೆಟ್ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಟೀಂ ಇಂಡಿಯಾ ಮಾಜಿ ಆಟಗಾರ ರವಿಶಾಸ್ತ್ರಿ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಿತು. 117 ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 12.5 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ ಜಯ ಸಾಧಿಸಿತು.
'ಇದು ನಿಮ್ಮ ಮೊದಲ ಪಂದ್ಯ. ಐಪಿಎಲ್ ಇತಿಹಾಸದಲ್ಲಿ, ಯಾವುದೇ ಭಾರತೀಯ ಬೌಲರ್ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದಿಲ್ಲ. ನೀವು ಊಟಕ್ಕೆ ಏನು ತಿಂದಿದ್ದೀರಿ?' ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮಿಡ್-ಇನಿಂಗ್ಸ್ ಸಂದರ್ಶನದಲ್ಲಿ ಕೇಳಿದರು.
ಇದಕ್ಕೆ ಉತ್ತರಿಸಿದ ಅಶ್ವನಿ, 'ಒತ್ತಡವಿದ್ದುದರಿಂದ ನಾನು ಬಾಳೆಹಣ್ಣನ್ನು ಮಾತ್ರ ತಿಂದಿದ್ದೆ, ಆದ್ದರಿಂದ ಹೆಚ್ಚು ಹಸಿದ ಭಾವನೆ ಇರಲಿಲ್ಲ' ಎಂದಿದ್ದಾರೆ.
'ಬಹುತ್ ಜಬರ್‌ದಸ್ತ್! ಬನಾನ ರಕ್ಖೋ ಬ್ಯಾಗ್ ಮೇ ಹಮೇಶಾ (ಬಹಳ ಅದ್ಭುತವಾಗಿದೆ! ಯಾವಾಗಲೂ ನಿಮ್ಮ ಬ್ಯಾಗಿನಲ್ಲಿ ಬಾಳೆಹಣ್ಣನ್ನು ಇರಿಸಿಕೊಳ್ಳಿ)' ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
23 ವರ್ಷದ ಅಶ್ವನಿ ಕುಮಾರ್ ಅವರು 3 ಓವರ್‌ಗಳಲ್ಲಿ 24 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಕಬಳಿಸಿದರು. ಮುಂಬೈ ತಂಡದ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ಹಾಲಿ ಚಾಂಪಿಯನ್ ಕೋಲ್ಕತ್ತಾ ತಂಡವನ್ನು 116 ರನ್‌ಗಳಿಗೆ ಕಟ್ಟಿಹಾಕಿತು.
'ನಾಯಕ ಹಾರ್ದಿಕ್ ಪಾಂಡ್ಯ ಅವರು, ಇದು ನಿಮ್ಮ ಚೊಚ್ಚಲ ಪಂದ್ಯವಾದ್ದರಿಂದ, ನಿಮ್ಮನ್ನು ನೀವು ಆನಂದಿಸಿ. ನೀವು ಈಗಿರುವಂತೆಯೇ ಬೌಲಿಂಗ್ ಮಾಡುವುದನ್ನು ಮುಂದುವರಿಸಿ ಎಂದು ಹೇಳಿದರು' ಎಂದು ತಿಳಿಸಿದರು.
Advertisement