
ಐಪಿಎಲ್ 2025ನೇ ಆವೃತ್ತಿಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಟೂರ್ನಿಯಲ್ಲಿ ತಾವು ಆಡಿದ್ದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಇದೀಗ ಜಿಟಿ ವಿರುದ್ಧ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಇತ್ತ ವಿರಾಟ್ ಕೊಹ್ಲಿ ಅಭಿಮಾನಿಗಳು ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಗುಜರಾತ್ ಟೈಟಾನ್ಸ್ ತಂಡದ ವೇಗಿ ಅರ್ಷದ್ ಖಾನ್ ಔಟ್ ಮಾಡಿದರು. ಇದರಿಂದ ಕೋಪಗೊಂಡ ಕೊಹ್ಲಿ ಫ್ಯಾನ್ಸ್ ಅರ್ಷದ್ ವಾರ್ಸಿ ಅವರನ್ನು ಅರ್ಷದ್ ಖಾನ್ ಎಂದುಕೊಂಡು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಬುಧವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಅರ್ಷದ್ ಖಾನ್ ಅವರು ವಿರಾಟ್ ಅವರ ವಿಕೆಟ್ ಕಬಳಿಸಿದರು. ಈ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಅರ್ಷದ್ ವಾರ್ಸಿ ಅವರ ಪೋಸ್ಟ್‌ಗೆ ಕೊಹ್ಲಿ ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. 'ಕೊಹ್ಲಿ ಕೋ ಔಟ್ ಕ್ಯೂಂ ಕಿಯಾ' ಎಂದು ಒಬ್ಬ ಅಭಿಮಾನಿ ವಾರ್ಸಿ ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಇದ್ದಾರೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು. ಆರ್‌ಸಿಬಿ ಫಿಲ್ ಸಾಲ್ಟ್ 14, ವಿರಾಟ್ ಕೊಹ್ಲಿ 7, ದೇವದತ್ ಪಡಿಕ್ಕಲ್ 4, ರಜತ್ ಪಾಟೀದಾರ್ 12, ಲಿಯಾಮ್ ಲಿವಿಂಗ್‌ಸ್ಟೋನ್ 54, ಜಿತೇಶ್ ಶರ್ಮಾ 33, ಕೃನಾಲ್ ಪಾಂಡ್ಯ 5, ಟಿಮ್ ಡೇವಿಡ್ 32 ಮತ್ತು ಭುವನೇಶ್ವರ್ ಕುಮಾರ್ ಅಜೇಯ 1 ರನ್ ಗಳಿಸಿದರು.
ಜಿಟಿ ಪರ ಮೊಹಮ್ಮದ್ ಸಿರಾಜ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಇನ್ನುಳಿದಂತೆ, ಅರ್ಷದ್ ಖಾನ್ 1, ಪ್ರಸಿದ್ಧ್ ಕೃಷ್ಣ 1, ಇಶಾಂತ್ ಶರ್ಮಾ 1 ಮತ್ತು ಸಾಯಿ ಕಿಶೋರ್ 2 ವಿಕೆಟ್ ಗಳಿಸಿದರು.
ಆರ್‌ಸಿಬಿ ನೀಡಿದ್ದ 170 ರನ್ ಗುರಿ ಬೆನ್ನತ್ತಿದ ಜಿಟಿ ತಂಡವು ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು. ಈ ಮೂಲಕ ಗುಜರಾತ್ ಟೈಟಾನ್ಸ್ ತಾನು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
Advertisement