
ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿನ ಬೆಳವಣಿಗೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಧನಶ್ರೀ ವರ್ಮಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಚಾಹಲ್, ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಚಾಹಲ್ ಕಾಣಿಸಿಕೊಂಡಾಗಿನಿಂದ, ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ. ಮಹ್ವಾಶ್ ಇದೀಗ ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು, ನಾನು ಕ್ಯಾಶುಯಲ್ ಡೇಟಿಂಗ್‌ನಲ್ಲಿ ನಂಬಿಕೆ ಇಡುವುದಿಲ್ಲ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಆ ಸಂಬಂಧ ಮುರಿದು ಬೀಳುವುದನ್ನು ನೋಡಿದ್ದೇನೆ ಎಂದಿದ್ದಾರೆ.
'ನಾನು ಸಿಂಗಲ್ ಆಗಿದ್ದೇನೆ ಮತ್ತು ಇಂದಿನ ಕಾಲದಲ್ಲಿ ಮದುವೆಯ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ನಾನು ಮದುವೆಯಾಗಬೇಕಾದಾಗ ಮಾತ್ರ ಡೇಟಿಂಗ್ ಮಾಡುತ್ತೇನೆ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ ಏಕೆಂದರೆ, ನಾನು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತೇನೆ. ಧೂಮ್ ಚಿತ್ರದಲ್ಲಿರುವಂತೆ ಹೆಂಡತಿ ಮತ್ತು ಮಕ್ಕಳೊಂದಿಗೆ ಭವಿಷ್ಯವನ್ನು ಕಲ್ಪಿಸಿಕೊಳ್ಳುವ ವ್ಯಕ್ತಿ ನಾನು. ಹೀಗಾಗಿ, ಮದುವೆಯನ್ನು ಗುರಿಯಾಗಿಟ್ಟುಕೊಂಡರೆ ಮಾತ್ರ ಉದ್ದೇಶಪೂರ್ವಕವಾಗಿ ಡೇಟಿಂಗ್ ಮಾಡುತ್ತೇನೆ' ಎಂದಿದ್ದಾರೆ.
'ನನಗೆ ಮದುವೆಯ ಪರಿಕಲ್ಪನೆಯೇ ಅರ್ಥವಾಗುತ್ತಿಲ್ಲ. ಹೀಗಾಗಿಯೇ ನಾನು ಅದನ್ನು ತಡೆದಿದ್ದೇನೆ. ನನಗೆ 19ನೇ ವಯಸ್ಸಿನಲ್ಲಿಯೇ ನಿಶ್ಚಿತಾರ್ಥವಾಗಿತ್ತು ಮತ್ತು ನಾನು ಅದನ್ನು 21 ನೇ ವಯಸ್ಸಿನಲ್ಲಿ ರದ್ದುಗೊಳಿಸಿದೆ. ಅಲಿಘರ್‌ನಂತಹ ಸಣ್ಣ ಪಟ್ಟಣದಲ್ಲಿ ಬೆಳೆದ ನಮಗೆ ಒಳ್ಳೆಯ ಹುಡುಗನನ್ನು ಹುಡುಕಬೇಕು ಮತ್ತು ಮದುವೆಯಾಗಬೇಕು ಎಂಬ ಏಕೈಕ ಷರತ್ತು ಇತ್ತು. ಅದು ನಮ್ಮ ಗುರಿಯಾಗಿತ್ತು' ಎಂದು ಮಹ್ವಾಶ್ ಹೇಳಿದರು.
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ 2020ರ ಡಿಸೆಂಬರ್‌ನಲ್ಲಿ ಗುರಂಗಾಂವ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. 2023ರ ಹೊತ್ತಿಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ತಿಳಿಯಿತು. 2023 ರ ಅಂತ್ಯದ ವೇಳೆಗೆ, ಯುಜ್ವೇಂದ್ರ ಧನಶ್ರೀ ವರ್ಮಾ ಅವರೊಂದಿಗಿನ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿಹಾಕಿದರು ಮತ್ತು ಇಬ್ಬರೂ Instagram ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದರು.
2025ರ ಫೆಬ್ರುವರಿಯಲ್ಲಿ, ಅವರು ಬಾಂದ್ರಾ ಕುಟುಂಬ ನ್ಯಾಯಾಲಯದ ಹೊರಗೆ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 18 ತಿಂಗಳು ಪ್ರತ್ಯೇಕವಾಗಿ ವಾಸಿಸಿದ ನಂತರ, ಯುಜ್ವೇಂದ್ರ ಮತ್ತು ಧನಶ್ರೀ ಮಾರ್ಚ್ 20, 2025 ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು.
Advertisement