IPL 2025: ಸತತ ನಾಲ್ಕು ಪಂದ್ಯಗಳಲ್ಲಿ CSK ಸೋಲು; ಕಳಪೆ ಫೀಲ್ಡಿಂಗ್ ಕಾರಣ ಎಂದ ನಾಯಕ ರುತುರಾಜ್ ಗಾಯಕ್ವಾಡ್!

ಐಪಿಎಲ್‌ 2025ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಸತತ ನಾಲ್ಕನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
ರುತುರಾಜ್ ಗಾಯಕ್ವಾಡ್
ರುತುರಾಜ್ ಗಾಯಕ್ವಾಡ್
Updated on

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ರುತುರಾಜ್ ಗಾಯಕ್ವಾಡ್, ತಂಡದ ಸತತ ನಾಲ್ಕು ಸೋಲುಗಳಿಗೆ ಕಳಪೆ ಫೀಲ್ಡಿಂಗ್ ಕಾರಣವಾಗಿದೆ ಎಂದಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಗಾಯಕ್ವಾಡ್, 'ಕಳೆದ ನಾಲ್ಕು ಪಂದ್ಯಗಳಲ್ಲಿ, ನಮ್ಮ ಕಡೆಯಿಂದ ಆಗಿರುವ ಸಮಸ್ಯೆ ಎಂದರೆ ಕಳಪೆ ಫೀಲ್ಡಿಂಗ್ ಎಂದು ನಾನು ಭಾವಿಸುತ್ತೇನೆ. ಇದು ನಿರ್ಣಾಯಕವಾಗಿದೆ. ನಾವು ಬಿಡುತ್ತಿರುವ ಕ್ಯಾಚ್‌ಗಳಿಂದಾಗಿ ಅದೇ ಬ್ಯಾಟ್ಸ್‌ಮನ್ 15, 20, 30 ರನ್‌ಗಳನ್ನು ಗಳಿಸುತ್ತಿದ್ದಾರೆ' ಎಂದರು.

ಪ್ರಿಯಾಂಶ್ ಅವರ ಶತಕದ ಬಗ್ಗೆ ಮಾತನಾಡಿದ ಅವರು, 'ಕೆಲವೊಮ್ಮೆ ನೀವು ಅದನ್ನು (ಆರ್ಯ ಅವರ 100) ಮೆಚ್ಚಬೇಕು. ಪ್ರಿಯಾಂಶ್ ಚೆನ್ನಾಗಿ ಆಡಿದರು. ನಾವು ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದೆವು. ಆದರೆ, ಅವರು ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದರು. 10-15 ರನ್‌ಗಳು ಕಡಿಮೆಯಾಗಿದ್ದರೆ ನಮಗೆ ಸಹಾಯವಾಗುತ್ತಿತ್ತು. ಆದರೆ, ಅದು ನಾವು ಕೈಬಿಟ್ಟ ಕ್ಯಾಚ್‌ಗಳಿಂದಾಗಿ ಸಾಧ್ಯವಾಗಲಿಲ್ಲ' ಎಂದು ಹೇಳಿದರು.

ತಮ್ಮ ತಂಡದ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಗಾಯಕ್ವಾಡ್, 'ಆರಂಭಿಕರಾಗಿ ಬರುವ ನಮ್ಮ ಇಬ್ಬರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು (ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ) ಉತ್ತಮವಾಗಿ ಆಡುತ್ತಾರೆ. ಅವರು ಉತ್ತಮ ಪವರ್‌ಪ್ಲೇ ಹೊಂದಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ ಬಹಳಷ್ಟು ಸಕಾರಾತ್ಮಕ ಅಂಶಗಳು ಕಂಡುಬರುತ್ತವೆ. ಇಂದು ನಾವು 2-3 ಹಿಟ್‌ಗಳ ದೂರದಲ್ಲಿದ್ದೇವೆ. ಜಡ್ಡು (ರವೀಂದ್ರ ಜಡೇಜ), ಅವರ ಪಾತ್ರವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಪಂದ್ಯಕ್ಕೂ ಮುನ್ನ ಫೀಲ್ಡಿಂಗ್ ಅನ್ನು ಆನಂದಿಸಬೇಕು ಎಂದು ನಾನು ಹೇಳಿದ್ದೆ. ನೀವು ನರ್ವಸ್ ಆಗಿದ್ದರೆ, ನೀವು ಕ್ಯಾಚ್ ಬಿಡುತ್ತೀರಿ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ನೀವು ಕೆಟ್ಟ ದಿನಗಳನ್ನು ಎದುರಿಸಬಹುದು' ಎಂದು ತಿಳಿಸಿದರು.

ರುತುರಾಜ್ ಗಾಯಕ್ವಾಡ್
IPL 2025: ಮತ್ತೆ ಸೋತ CSK, 18 ರನ್ ಗಳಿಂದ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್!

ಟಾಸ್ ಗೆದ್ದ ಪಿಬಿಕೆಎಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ 85 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ತಂಡಕ್ಕೆ ಆಸರೆಯಾಗಿದ್ದು, ಪ್ರಿಯಾಂಶ್. 42 ಎಸೆತಗಳಲ್ಲಿ 103 ರನ್ ಗಳಿಸಿದರೆ, ಶಶಾಂಕ್ 36 ಎಸೆತಗಳಲ್ಲಿ 52* ಮತ್ತು ಜಾನ್ಸೆನ್ 19 ಎಸೆತಗಳಲ್ಲಿ 34* ರನ್ ಗಳಿಸಿ ತಂಡಕ್ಕೆ ಉತ್ತಮ ರನ್ ಕಲೆಹಾಕುವಲ್ಲಿ ನೆರವಾದರು. ಈ ಮೂಲಕ ಪಂಜಾಬ್ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು.

220 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಪರ ರಚಿನ್ ರವೀಂದ್ರ (23 ಎಸೆತಗಳಲ್ಲಿ 36) ಮತ್ತು ಡೆವೊನ್ ಕಾನ್ವೇ (49 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 69 ರನ್) ನಡುವೆ 61 ರನ್‌ಗಳ ಉತ್ತಮ ಜೊತೆಯಾಟ ಮೂಡಿಬಂತು. ಈ ಮೂಲಕ CSK ಉತ್ತಮ ಆರಂಭ ಪಡೆಯಿತು. ಶಿವಂ ದುಬೆ (27 ಎಸೆತಗಳಲ್ಲಿ 42, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ) ಉತ್ತಮ ಪ್ರದರ್ಶನ ನೀಡಿದರು. ಎಂಎಸ್ ಧೋನಿ 12 ಎಸೆತಗಳಲ್ಲಿ 27 ರನ್ ಗಳಿಸಿದರು. ಆದರೆ, 5 ವಿಕೆಟ್ ನಷ್ಟಕ್ಕೆ ಕೇವಲ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 18 ರನ್‌ಗಳಿಂದ ಸೋತಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com