
ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 163 ರನ್ ಕಲೆಹಾಕಿದ್ದು, DCಗೆ ಗೆಲ್ಲಲು 164 ರನ್ ಗಳ ಸವಾಲಿನ ಗುರಿ ನೀಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಆರ್ ಸಿಬಿ ಪರ ಫಿಲ್ ಸಾಲ್ಟ್ (37 ರನ್) ಮತ್ತು ಟಿಮ್ ಡೇವಿಡ್ (37) ಭರ್ಜರಿ ಬ್ಯಾಟಿಂಗ್ ಮಾಡಿ ಆರ್ ಸಿಬಿಯ ಸವಾಲಿನ ಗುರಿಗೆ ಕಾರಣರಾದರು.
ಭರ್ಜರಿ ಆರಂಭ ನೀಡಿದ ಫಿಲ್ ಸಾಲ್ಟ್
ಇಂದಿನ ಪಂದ್ಯದಲ್ಲಿ ಆರ್ ಸಿಬಿ ಪರ ಫಿಲ್ ಸಾಲ್ಟ್ ಭರ್ಜರಿ ಆರಂಭ ನೀಡಿದರು. ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 61 ರನ್ ಗಳ ಜೊತೆಯಾಟವಾಡಿತು. ಅದೂ ಕೂಡ ಕೇವಲ 3.4 ಓವರ್ ನಲ್ಲಿ.. ಅದರಲ್ಲೂ ಆರ್ ಸಿಬಿ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ ಕೇವಲ 17 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 37 ರನ್ ಗಳಿಸಿದರು.
ಒಂದೇ ಓವರ್ ನಲ್ಲಿ 30ರನ್ ಚಚ್ಚಿದ ಸಾಲ್ಟ್
ಇನ್ನು ಆರ್ ಸಿಬಿ ಇನ್ನಿಂಗ್ಸ್ ನ 3ನೇ ಓವರ್ ನಲ್ಲಿ ಅಕ್ಷರಶಃ ಫಿಲ್ ಸಾಲ್ಟ್ ರನ್ ಮಳೆಯನ್ನೇ ಹರಿಸಿದರು. ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ ನಲ್ಲಿ ಸಾಲ್ಟ್ ಬರೊಬ್ಬರಿ 30ರನ್ ಚಚ್ಚಿದರು. ಆ ಓವರ್ ನಲ್ಲಿ ಸಾಲ್ಟ್ 2 ಸಿಕ್ಸರ್ ಮತ್ತು 3 ಬೌಂಡರಿ ಭಾರಿಸಿದರೆ, ಕೊನೆಯ ಎಸೆತದಲ್ಲಿ ಕೊಹ್ಲಿ ಬೌಂಡರಿ ಪಡೆದರು. ಒಟ್ಟಾರೆ ಆ ಓವರ್ ನಲ್ಲಿ 30 ರನ್ ಲಭಿಸಿತು.
ಕೊಹ್ಲಿ ಎಡವಟ್ಟು ರನೌಟ್ ಗೆ ಬಲಿಯಾದ ಸಾಲ್ಟ್
ಇನ್ನು ಈ ಅದ್ಭುತ ಓವರ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟಿನಿಂದಾಗಿ ಫಿಲ್ ಸಾಲ್ಟ್ ರನೌಟ್ ಗೆ ಬಲಿಯಾದರು. ಅಕ್ಸರ್ ಪಟೇಲ್ ಎಸೆದ 4ನೇ ಓವರ್ ನ 5ನೇ ಎಸೆತದಲ್ಲಿ ಸಾಲ್ಟ್ ಚೆಂಡನ್ನು ಕವರ್ ನತ್ತ ತಳ್ಳಿ ಸಿಂಗಲ್ ಪಡೆಯಲು ಮುಂದಾದರು. ಆದರೆ ಈ ವೇಳೆ ನಡೆದ ಗೊಂದಲದಿಂದಾಗಿ ಕೊಹ್ಲಿ ಸಿಂಗಲ್ ಗಾಗಿ ಓಡಲಿಲ್ಲ. ಆದರೆ ಅದಾಗಲೇ ಅರ್ಧ ಕ್ರೀಸ್ ಗೆ ಓಡಿ ಬಂದಿದ್ದ ಸಾಲ್ಟ್ ಮರಳಿ ಕ್ರೀಸ್ ತಲುಪುವ ವೇಳೆಗೆ ಕೆಎಲ್ ರಾಹುಲ್ ಬೇಲ್ಸ್ ಎಗರಿಸಿದ್ದರು. ಹೀಗಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಾಲ್ಟ್ ಅನಗತ್ಯ ರನೌಟ್ ಗೆ ಬಲಿಯಾದರು.
ಮುಗ್ಗರಿಸಿದ ಮಧ್ಯಮ ಕ್ರಮಾಂಕ
ಇನ್ನು ಹಾಲಿ ಟೂರ್ನಿಯಲ್ಲಿ ಆರ್ ಸಿಬಿ ತಂಡದ ಬೆನ್ನೆಲುಬು ಎಂದರೆ ಅದು ತಂಡದ ಮಧ್ಯಮ ಕ್ರಮಾಂಕ. ಆದರೆ ಇಂದಿನ ಪಂದ್ಯದಲ್ಲಿ ಆರ್ ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಲೈನಪ್ ಅಕ್ಷರಶಃ ವಿಫಲವಾಯಿತು. ಫಿಲ್ ಸಾಲ್ಟ್ ರನೌಟ್ ಗೆ ಬಲಿಯಾದ ಬೆನ್ನಲ್ಲೇ ಆರ್ ಸಿಬಿ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ವಿರಾಟ್ ಕೊಹ್ಲಿ 22 ರನ್ ಗಳಿಸಿ ವಿಪ್ರಾಜ್ ನಿಗಮ್ ಗೆ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ 1 ರನ್ ಗಳಿಸಿ ಮುಖೇಶ್ ಕುಮಾರ್ ಬೌಲಿಂಗ್ ನಲ್ಲಿ ಔಟಾದರು.
ನಾಯಕ ರಜತ್ ಪಟಿದಾರ್ 25 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾದರು. ಸ್ಫೋಟಕ ಬ್ಯಾಟರ್ ಲಿವಿಂಗ್ ಸ್ಟೋನ್ 4 ರನ್ ಗಳಿಸಿ ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರೆ, ಜಿತೇಶ್ ಶರ್ಮಾ 3 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಕೃಣಾಲ್ ಪಾಂಡ್ಯಾ ರನ್ ಗಳಿಕೆ 18 ರನ್ ಗಳಿಗೇ ಸೀಮಿತವಾಯಿತು.
ಕೊನೆಯಲ್ಲಿ ಟಿಮ್ ಡೇವಿಡ್ ಅಬ್ಬರ
ಈ ಹಂತದಲ್ಲಿ ಆರ್ ಸಿಬಿ ಮೊತ್ತ 150 ರನ್ ಗಡಿದಾಟುವುದೂ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 20 ಎಸೆತ ಎದುರಿಸಿದ ಟಿಮ್ ಡೇವಿಡ್ 4 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 37ರನ್ ಚಚ್ಚಿದರು. ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ಮೊತ್ತ 160ರ ಗಡಿ ದಾಟಿತು.
Advertisement