
ಐಪಿಎಲ್ 2025ನೇ ಆವೃತ್ತಿಯು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿಎಸ್‌ಕೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಸುಣ್ಣವಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ತಂಡವು ಈ ಬಾರಿ ತೋರುತ್ತಿರುವ ಪ್ರದರ್ಶನಕ್ಕೆ ಫ್ಯಾನ್ಸ್ ಬೇಸತ್ತಿದ್ದು, ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಸಿಎಸ್‌ಕೆ ಆಟಗಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಬೌಲರ್ ಆರ್ ಅಶ್ವಿನ್, ಟ್ರೋಲ್‌ಗಳ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ರಚನಾತ್ಮಕ ಪ್ರತಿಕ್ರಿಯೆಗಳಿಗೆ ತಾನು ಮುಕ್ತವಾಗಿರುತ್ತೇನೆ ಎಂದಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಫ್-ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಕ್ರಿಕೆಟ್ ವಿಶ್ಲೇಷಕ ಪ್ರಸನ್ನ ಅಗೋರಾಮ್ ಅವರು ಸಿಎಸ್‌ಕೆಗೆ ಈ ಆವೃತ್ತಿಯಲ್ಲಿ ಉಂಟಾಗಿರುವ ತೊಂದರೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳನ್ನು ಮೆಚ್ಚಿಕೊಂಡಿದ್ದು, ಅವರೇ ರಿಯಲ್ ಫ್ಯಾನ್ಸ್ ಎಂದಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್ ಅಶ್ವಿನ್ ಅವರನ್ನು 9.75 ಕೋಟಿ ರೂ.ಗಳಿಗೆ ಖರೀದಿಸಿತು. ಈ ಮೂಲಕ ಅಶ್ವಿನ್ ಸಿಎಸ್‌ಕೆ ಮರಳಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
'ಸಾಮಾನ್ಯವಾಗಿ, ಯಾರೂ ಸೋಲುವುದನ್ನು ಇಷ್ಟಪಡುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಟ್ರೋಲ್ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನರು ನಿಮ್ಮ ಬಗ್ಗೆ ಮಾತನಾಡುತ್ತಿದ್ದರೆ, ನಿಮ್ಮ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರೆ, ಅದನ್ನು ನಾವು ರಚನಾತ್ಮಕ ಟೀಕೆ ಎಂದು ತೆಗೆದುಕೊಳ್ಳಬಹುದು. ಆದರೆ, ಕೆಲವು ಜನರು ಕೇವಲ ವಿಷವನ್ನೇ ಕಕ್ಕುತ್ತಾರೆ. ಆ ಟೀಕೆಗಳು ರಚನಾತ್ಮಕವಾಗಿರುವುದಿಲ್ಲ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನಲ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಉತ್ತಮವಾಗಿ ಆಡದಿದ್ದಾಗ ಮಾಡುವ ಟೀಕೆಗಳನ್ನು ತೆಗೆದುಕೊಳ್ಳುವುದು ಸರಿ. ಆದರೆ, ಕೆಲವರು ಆಟಗಾರರನ್ನು ನಿಂದಿಸುತ್ತಾರೆ. ನಿಮ್ಮ ಪ್ರದರ್ಶನಗಳ ಕುರಿತು ಮಾತನಾಡಿದರೆ ಅದು ನಮ್ಮ ಅಥವಾ ತಂಡದ ಮೇಲಿನ ಪ್ರೀತಿಯಿಂದ ಬರುತ್ತದೆ. ನಾನು ಹೊರಗೆ ಹೋದರೆ ಈಗಲೂ ನನ್ನ ತಂದೆ ನನ್ನನ್ನು ಖಂಡಿಸುತ್ತಾರೆ. ನನ್ನ ಪೋಷಕರು ನನ್ನನ್ನು ಗದರಿಸುತ್ತಾರೆ. ಪ್ರೀತಿ ಇರುವ ಕಡೆಯಿಂದ ಬರುವ ಟೀಕೆ ಸಂಪೂರ್ಣವಾಗಿ ಸರಿಯಾಗಿರುತ್ತದೆ ಎಂದಿದ್ದಾರೆ.
ಆರ್‌ಸಿಬಿ ಅಭಿಮಾನಿಗಳನ್ನು ಮೆಚ್ಚಿಕೊಂಡ ಅಶ್ವಿನ್
'ಅಭಿಮಾನಿಗಳಾಗಿರುವುದು ಸುಲಭವಲ್ಲ. ನಾನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾಗಲೂ ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಸಂಪೂರ್ಣವಾಗಿ ದೂರವಾಗಿರುತ್ತೇನೆ. ನೀವು ಆಟದ ಬಗ್ಗೆ ನನ್ನೊಂದಿಗೆ ಮಾತನಾಡಿದಾಗಲೂ ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ. ಪಂದ್ಯಾವಳಿಯ ಬಿಸಿಲಿನಲ್ಲಿರುವಾಗ ಸಾಮಾಜಿಕ ಮಾಧ್ಯಮವನ್ನು ಸಂಪೂರ್ಣವಾಗಿ ತ್ಯಜಿಸುತ್ತೇನೆ. ನಾನು ಉತ್ತಮ ಪ್ರದರ್ಶನ ನೀಡದಿದ್ದಾಗ ನನ್ನ ಸ್ನೇಹಿತರು ಕೆಲವೊಮ್ಮೆ 'ಚಿಂತಿಸಬೇಡಿ, ದೃಢವಾಗಿರಿ' ಎಂದು ನನಗೆ ಸಂದೇಶ ಕಳುಹಿಸುತ್ತಾರೆ. ನಾನು ಅವರಿಗೆ ಈ ವಿಷಯಗಳನ್ನು ಸಹ ನನಗೆ ಹೇಳಬೇಡಿ ಎಂದು ಹೇಳುತ್ತೇನೆ. ಹೊರಗೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ನನಗೆ ಆಸಕ್ತಿ ಇಲ್ಲ' ಎಂದು ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿದ ಅಶ್ವಿನ್, 'ಅಭಿಮಾನಿಗಳ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ನಾನು ದಿನೇಶ್ ಕಾರ್ತಿಕ್ ಅವರೊಂದಿಗೆ ಕುಟ್ಟಿ ಸ್ಟೋರೀಸ್ ಸಂಚಿಕೆಯನ್ನು ಮಾಡಿದ್ದೆ. ಆಗ ಅವರು ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಒಂದು ವಿಷಯ ಹೇಳಿದರು. ಆರ್‌ಸಿಬಿ ಅಭಿಮಾನಿಗಳು ಯಾವುದೇ ಹಂತದಲ್ಲಿ ಬೇರೆಯವರ ಮುಂದೆ ತಮ್ಮ ತಂಡ ಮತ್ತು ತಂಡದ ಯಾವುದೇ ಆಟಗಾರರನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. ಅಭಿಮಾನಿಗಳು ಎಂದ ಮೇಲೆ ಟೀಕೆ ಮಾಡುವುದು ಸಹಜ. ಆದರೆ, ಯಾವುದೇ ಆಟಗಾರ ಬೇಕಂತಲೇ ತಪ್ಪುಗಳನ್ನು ಮಾಡುವುದಿಲ್ಲ' ಎಂದರು.
'ಟೀಕೆಗಳು ರಚನಾತ್ಮಕವಾಗಿರಬೇಕು. ಅದೇ ಸಮಯದಲ್ಲಿ, ತಮ್ಮ ಆಟಗಾರರನ್ನು ಕೆಟ್ಟ ಸಂದರ್ಭಗಳಲ್ಲಿ ಬಿಟ್ಟುಕೊಡದ ಅಭಿಮಾನಿಗಳೇ ನಿಜವಾದ ಅಭಿಮಾನಿಗಳು ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.
Advertisement