
ನವದೆಹಲಿ: ಗಾಯಕ ಸೋನು ನಿಗಮ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೆಂಬಲಿಗರು ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಗುರುವಾರ ಐಪಿಎಲ್ 2025ನೇ ಆವೃತ್ತಿಯ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರನ್ನು ವಿಪ್ರಜ್ ನಿಗಮ್ ಔಟ್ ಮಾಡಿದ ನಂತರ ಸೋನು ನಿಗಮ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಕೇವಲ 22 ರನ್‌ಗಳಿಗೆ ವಿರಾಟ್ ಅವರನ್ನು ಯಶಸ್ವಿಯಾಗಿ ಔಟ್ ಮಾಡುವ ಮೂಲಕ ಅಭಿಮಾನಿಗಳನ್ನು ಸೈಲೆಂಟ್ ಆಗಿಸಿದರು.
ಏಳನೇ ಓವರ್‌ನಲ್ಲಿ ಆರ್‌ಸಿಬಿ ಮಾಜಿ ನಾಯಕ ಇನ್‌ಸೈಡ್-ಔಟ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡನ್ನು ಸರಿಯಾಗಿ ಬ್ಯಾಟ್‌ಗೆ ಬಾರದೆ ಅದನ್ನು ಲಾಂಗ್-ಆಫ್ ಕಡೆಗೆ ಕಳುಹಿಸಿದರು. ಈ ವೇಳೆ ಮಿಚೆಲ್ ಸ್ಟಾರ್ಕ್ ಪ್ರಭಾವಶಾಲಿ ಸ್ಲೈಡಿಂಗ್ ಕ್ಯಾಚ್ ಪಡೆದರು. ಈ ಮೂಲಕ ಕೊಹ್ಲಿ ನಿರ್ಗಮಿಸಿದರು.
ಇದಾದ ಬಳಿಕ ಸೋನು ನಿಗಮ್ ಅವರ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ 'ನಾನು ನಿಮ್ಮ ದೊಡ್ಡ ಅಭಿಮಾನಿ ಸರ್, ಆದರೆ ಕೊಹ್ಲಿ ಅವರನ್ನು ಏಕೆ ಔಟ್ ಮಾಡಿದಿರಿ' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಕೊಹ್ಲಿ ವಿಕೆಟ್ ತೆಗೆದುಕೊಳ್ಳಲು ನಿಮಗೆ ಎಷ್ಟು ಧೈರ್ಯ' ಎಂದು ಪ್ರಶ್ನಿಸಿದ್ದಾರೆ.
ಅಭಿಮಾನಿಗಳು ಈ ಹಿಂದೆಯೂ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದಕ್ಕೆ ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಜಿಟಿ ಬೌಲರ್ ಅರ್ಷದ್ ಖಾನ್ ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸಿದರು. ಈ ವೇಳೆ ಗೊಂದಲಕ್ಕೀಡಾದ ಅಭಿಮಾನಿಗಳು ಅರ್ಷದ್ ಖಾನ್ ಬದಲಿಗೆ, ಅರ್ಷದ್ ವಾರ್ಸಿ ಅವರ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡಿದ್ದರು.
ನಟ ಅಜಯ್ ದೇವಗನ್ ಅವರನ್ನು ಒಳಗೊಂಡ ವಾರ್ಸಿ ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಅಭಿಮಾನಿಯೊಬ್ಬರು 'ಕೊಹ್ಲಿ ಕೋ ಔಟ್ ಕ್ಯೂಂ ಕಿಯಾ' (ನೀವು ಕೊಹ್ಲಿಯನ್ನು ಏಕೆ ಔಟ್ ಮಾಡಿದ್ದೀರಿ?) ಎಂದು ಕಮೆಂಟ್ ಮಾಡಿದ್ದಾರೆ.
Advertisement