
ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಗೆಲುವಿನ ಹಾದಿಗೆ ಮರಳಿದೆ. ಎಸ್‌ಆರ್‌ಎಚ್ ಪರ ಆಡಿದ ಅಭಿಷೇಕ್ ಶರ್ಮಾ, ಕೇವಲ 55 ಎಸೆತಗಳಲ್ಲಿ 141 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ 2 ಓವರ್‌ಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಪಂದ್ಯದ ನಂತರ ಮಾತನಾಡಿದ ಅಭಿಷೇಕ್ ಶರ್ಮಾ, ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಸದ್ಯ ಮುಂಬೈ ಇಂಡಿಯನ್ಸ್ (MI) ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ಪ್ರೋತ್ಸಾಹದ ಮಾತುಗಳನ್ನು ಪಡೆಯುತ್ತಲೇ ಇದ್ದೆ ಎಂದಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ SRH ಪರ ಆಡಿದ 5 ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ಅಭಿಷೇಕ್ ವಿಫಲರಾಗಿದ್ದರು. ಇದೀಗ ಭರ್ಜರಿ ಪ್ರದರ್ಶನ ನೀಡುವುದರೊಂದಿಗೆ ನಿರಾಳರಾಗಿದ್ದಾರೆ. ಯುವರಾಜ್ ಸಿಂಗ್ ದೀರ್ಘಕಾಲದಿಂದ ಅಭಿಷೇಕ್ ಅವರಿಗೆ ಮಾರ್ಗದರ್ಶಕರಾಗಿದ್ದಾರೆ ಮತ್ತು ಸೂರ್ಯಕುಮಾರ್ ಕೂಡ ಉತ್ತಮ ಸ್ನೇಹಿತರಾಗಿದ್ದಾರೆ. ಪೈಪೋಟಿಯನ್ನು ಬದಿಗಿಟ್ಟು, ಸೂರ್ಯಕುಮಾರ್ ಯಾದವ್ ಅವರು SRH ಬ್ಯಾಟ್ಸ್‌ಮನ್ ಕಳಪೆ ಫಾರ್ಮ್‌ನಿಂದ ಹೊರಬರಲು ಪ್ರೋತ್ಸಾಹ ನೀಡಿದ್ದಾರೆ.
'ನಿಜ ಹೇಳಬೇಕೆಂದರೆ, ನಾನು ನಾಲ್ಕು ದಿನಗಳಿಂದ ಅಸ್ವಸ್ಥನಾಗಿದ್ದೆ. ನನಗೆ ಜ್ವರವಿತ್ತು. ಆದರೆ, ಯುವರಾಜ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಜನರು ನನ್ನ ಸುತ್ತಲೂ ಇರುವುದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಅವರು ಕರೆ ಮಾಡುತ್ತಲೇ ಇದ್ದರು, ಪರಿಶೀಲಿಸುತ್ತಲೇ ಇದ್ದರು ಮತ್ತು ಅವರಿಗೆ ನನ್ನ ಮೇಲೆ ನಂಬಿಕೆಯಿತ್ತು' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಹೇಳಿದರು.
'ನನಗೆ ನನ್ನ ಮೇಲೆಯೇ ಸ್ವಲ್ಪ ಅನುಮಾನ ಇದ್ದರೂ, ಅವರಿಬ್ಬರಿಗೆ ನನ್ನ ಮೇಲೆ ನಂಬಿಕೆ ಇತ್ತು. ಅವರಂತಹ ಅತ್ಯುತ್ತಮ ಜನರ ನಂಬಿಕೆ ಗಳಿಸಿದ್ದು, ತುಂಬಾ ಮುಖ್ಯವಾಗಿದೆ. ಅಂತಹ ಯಾರಾದರೂ ನಿಮ್ಮಲ್ಲಿ ನಂಬಿಕೆ ಇಟ್ಟಾಗ, ನೀವು ಮತ್ತೆ ನಿಮ್ಮಲ್ಲಿ ನಂಬಿಕೆ ಇಡಲು ಪ್ರಾರಂಭಿಸುತ್ತೀರಿ. ಒಂದು ಅತ್ಯುತ್ತಮ ಇನಿಂಗ್ಸ್‌ಗಾಗಿ ನಾನು ಕಾಯುತ್ತಿದ್ದೆ. ಅದು ಈಗ ಬಂದಿತು' ಎಂದರು.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಆರಂಭವಾಗುವ ಮೊದಲು, ಅಭಿಷೇಕ್ 10.50 ಸರಾಸರಿಯಲ್ಲಿ ಕೇವಲ 51 ರನ್ ಗಳಿಸಿದ್ದರು. ತಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು ಎಂಬುದನ್ನು ಒಪ್ಪಿಕೊಂಡರು.
'ಒತ್ತಡ ಇರಲಿಲ್ಲ ಎಂದು ನಾನು ಹೇಳಿದರೆ, ಸುಳ್ಳು ಹೇಳಿದಂತಾಗುತ್ತದೆ. ಮೂರ್ನಾಲ್ಕು ಇನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಮತ್ತು ತಂಡ ಸೋತರೆ, ವೈಯಕ್ತಿಕವಾಗಿ ಆಟಗಾರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೆ, ತಂಡದಲ್ಲಿ ನಕಾರಾತ್ಮಕ ಭಾವನೆ ಇರಲಿಲ್ಲ. 'ನಾವು ಸೋಲುತ್ತಿದ್ದೇವೆ' ಎಂಬ ಮನಸ್ಥಿತಿ ಯಾರಿಗೂ ಇರಲಿಲ್ಲ. ಎಲ್ಲರೂ ಸಕಾರಾತ್ಮಕವಾಗಿಯೇ ಇದ್ದರು. ತಂಡದಿಂದ ಏನೋ ದೊಡ್ಡ ವಿಷಯ ಬರುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿತ್ತು. ಅದೃಷ್ಟವಶಾತ್, ಇಂದು ನಾವು ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಮುರಿಯುವಲ್ಲಿ ಯಶಸ್ವಿಯಾದೆವು' ಎಂದು ಹೇಳಿದರು.
Advertisement